ಬೆಂಗಳೂರು: ಅನೈತಿಕ ಸಂಬಂಧ ಸಾಬೀತಿಗೆ ಮೂರನೇ ವ್ಯಕ್ತಿಯ ಖಾಸಗಿತನ ಧಕ್ಕೆ ಸರಿಯಲ್ಲ ಎಂದು ಮೊಬೈಲ್ ಟವರ್ ಮಾಹಿತಿ ಕೇಳಿದ ಆದೇಶವನ್ನು ಹೈಕೋರ್ಟ್ ರದ್ದುಪಡಿಸಿದೆ.
ವತಿಯಿಂದ ವಿಚ್ಛೇದನ ಕೋರಿ ಪತ್ನಿ ಅರ್ಜಿ ಸಲ್ಲಿಸಿದ್ದರು. ಪತ್ನಿಗೆ ಪ್ರಿಯಕರನೊಂದಿಗೆ ಅಕ್ರಮ ಸಂಬಂಧವಿದೆ ಎಂದು ಪತಿ ಆರೋಪಿಸಿದ್ದರು. ಪ್ರಿಯಕರನ ಮೊಬೈಲ್ ಟವರ್ ಮಾಹಿತಿ ಪಡೆಯುವಂತೆ ಪತಿ ಅರ್ಜಿ ಸಲ್ಲಿಸಿದ್ದು, ಕೌಟುಂಬಿಕ ನ್ಯಾಯಾಲಯ ಪತಿಯ ಅರ್ಜಿ ಪುರಸ್ಕರಿಸಿತ್ತು. ಪ್ರಿಯಕರನ ಟವರ್ ಮಾಹಿತಿ ನೀಡುವಂತೆ ಮೊಬೈಲ್ ಕಂಪನಿಗೆ ಸೂಚಿಸಿತ್ತು,
ಇದನ್ನು ಪ್ರಶ್ನಿಸಿ ಪ್ರಿಯಕರ ಹೈಕೋರ್ಟ್ ಮೊರೆ ಹೋಗಿದ್ದು, ವಿಚ್ಛೇದನ ಪ್ರಕರಣದಲ್ಲಿ ತಾನು ಪ್ರತಿವಾದಿ ಅಲ್ಲದಿದ್ದರೂ ಕೋರ್ಟ್ ಆದೇಶ ನೀಡಿದೆ. ತನ್ನ ಮೊಬೈಲ್ ಟವರ್ ಮಾಹಿತಿಯಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಮಾಡಬೇಕೆಂದು ಮನವಿ ಮಾಡಿದ್ದರು.
ವಿಚ್ಛೇದನ ಪ್ರಕರಣದಲ್ಲಿ ಪ್ರಿಯಕರ ಪ್ರತಿವಾದಿ ಆಗಿರಲಿಲ್ಲ. ಪತಿ ಆರೋಪಿಸಿದ್ದಕ್ಕೆ ಮೂರನೇ ವ್ಯಕ್ತಿಯ ಟವರ್ ಮಾಹಿತಿ ಕೇಳಿದ್ದು ಸರಿಯಲ್ಲ. ಪ್ರತಿ ನಾಗರೀಕನಿಗೂ ಖಾಸಗೀತನ ಕಾಪಾಡಿಕೊಳ್ಳುವ ಹಕ್ಕು ಇದೆ ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ತೀರ್ಪು ನೀಡಿದೆ.