ಪ್ಲಾಸ್ಟಿಕ್ ಎಷ್ಟು ಅಪಾಯಕಾರಿ, ಅದರಿಂದ ಆಗುವ ಸಮಸ್ಯೆ ಏನೇನು ಅನ್ನೋದು ಎಲ್ಲರಿಗೂ ಗೊತ್ತು. ಪ್ಲಾಸ್ಟಿಕ್ ನಿಂದಾಗಿ ಅನೇಕ ಜೀವಿಗಳು ಭೂಮಿಯಿಂದ ನಶಿಸಿ ಹೋಗುತ್ತಿವೆ.
ಅಷ್ಟೇ ಅಲ್ಲ, ಮನುಷ್ಯರ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ಆದರೂ ಪ್ಲಾಸ್ಟಿಕ್ ಬಳಕೆ ಕಡಿಮೆ ಆಗ್ತಿಲ್ಲ. ಇದರ ಕುರಿತಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತೆ. ಈಗ ಅನಿಲ್ ಚೌಹಾಣ್ ಕೂಡ ಅದೇ ಉದ್ದೇಶಕ್ಕಾಗಿ ತಮ್ಮ ಎರಡು ಪುಟಾಣಿ ಹೆಣ್ಣುಮಕ್ಕಳೊಂದಿಗೆ ಬಾಂಗ್ಲಾದತ್ತ ಸೈಕಲ್ ಪಯಣ ಬೆಳೆಸಿದ್ದಾರೆ.
ಅನಿಲ್ ಚೌಹಾಣ್ ತಮ್ಮ ಎರಡು ಮಕ್ಕಳಾದ ಏಳು ವರ್ಷದ ಶ್ರೇಯಾ ಮತ್ತು ನಾಲ್ಕು ವರ್ಷದ ಮಗಳು ಯುಕ್ತಾ ಜೊತೆಗೆ ದಮನ್ ಮತ್ತು ದಿಯು ಮಾರ್ಗದ ಮೂಲಕ ಬಾಂಗ್ಲಾದತ್ತ ಪಯಣ ಬೆಳೆಸಲಿದ್ದಾರೆ. ಈ ಸೈಕಲ್ ಪಯಣದ ಉದ್ದೇಶ ಸಿಂಗಲ್ ಯೂಸ್ ಪ್ಲಾಸ್ಟಿಕ್ ನಿಂದ ಆಗುವ ದುಷ್ಪರಿಣಾಮ ಏನೇನು ಎಂದು ಜನರಿಗೆ ಮನವರಿಕೆ ಆಗುವುದು. ಅವರ ಈ ಯಾತ್ರೆಯಲ್ಲಿ ಮಕ್ಕಳು ಸಹ ಖುಷಿ ಖುಷಿಯಿಂದ ಸಾಥ್ ಕೊಡ್ತಿದ್ಧಾರೆ.
ಜನವರಿ 1, 2022 ರಂದು ಸೈಕಲ್ ಯಾತ್ರೆ ಆರಂಭಿಸಿದ್ದ ಅನಿಲ್ ಈಗಾಗಲೇ ಗೋವಾ, ಗುಜರಾತ್, ರಾಜಸ್ತಾನ್, ದೆಹಲಿ ಮತ್ತು ಮತ್ತು ಮಧ್ಯಪ್ರದೇಶದ ಮೂಲಕ ಉತ್ತರಪ್ರದೇಶದ ಲಖ್ನೌ ತಲುಪಿದ್ದಾರೆ. ಈಗಾಗಲೇ 11ಸಾವಿರಕ್ಕೂ ಹೆಚ್ಚು ಕಿಲೋ ಮೀಟರ್ ಪ್ರಯಾಣ ಬೆಳೆಸಿದ ಇವರು, ಚಿಕ್ಕ ಪುಟ್ಟ ಹಳ್ಳಿಯಿಂದ ಹಿಡಿದು ದೊಡ್ಡ ದೊಡ್ಡ ನಗರಗಳಲ್ಲಿರುವ ಜನರಿಗೆ ಪ್ಲಾಸ್ಟಿಕ್ ಎಷ್ಟು ಅಪಾಯ ಅನ್ನೊದನ್ನ ತಿಳಿಸಿದ್ದಾರೆ.
ಪ್ಲಾಸ್ಟಿಕ್ ಕಸ ತಿಂದೇ ಅನೇಕ ಹಸುಗಳು ಸಾವಿಗೀಡಾಗಿವೆ. ಅಷ್ಟೆಅಲ್ಲ ಪ್ಲಾಸ್ಟಿಕ್ ಕಣಗಳು ಗಾಳಿಯಲ್ಲಿ ಬೆರೆತು ಮನುಷ್ಯನ ಶ್ವಾಸಕೋಶದೊಳಗೆ ಸೇರುತ್ತಿವೆ. ಆದ್ದರಿಂದ ಪ್ಲಾಸ್ಟಿಕ್ ಮುಕ್ತ ಪರಿಸರ ನಿರ್ಮಾಣ ಮಾಡಬೇಕು ಅನ್ನೊ ಉದ್ದೇಶ ಇಟ್ಟುಕೊಂಡೇ ಅನಿಲ್ ಚೌಹಾಣ್ ಸೈಕಲ್ ಯಾತ್ರೆ ಆರಂಭಿಸಿದ್ದಾರೆ. ಇವರ ಪತ್ನಿ ಮೃತಪಟ್ಟಿರುವ ಕಾರಣ, ಮಕ್ಕಳನ್ನು ಸಹ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ಧಾರೆ.