ಬೆಂಗಳೂರು: ನಾಳೆ ರಾಜ್ಯದ 11 ಜಿಲ್ಲೆಗಳಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ರಾಜಧಾನಿ ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳು, ಕರಾವಳಿ ಭಾಗದ ಕೆಲವು ಕಡೆ ತುಂತುರು ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳಕೊಲ್ಲಿಯಲ್ಲಿ, ಮಳೆ ಮಾರುತಗಳು ಚುರುಕಾಗಿರುವುದರಿಂದ ದಕ್ಷಿಣ ಒಳನಾಡಿನ ಅನೇಕ ಭಾಗದಲ್ಲಿ ಮೋಡ ಕವಿದ ವಾತಾವರಣ ಇದೆ. ಸೋಮವಾರ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಒಂದೆರಡು ಸ್ಥಳಗಳಲ್ಲಿ ತುಂತುರು ಮಳೆಯಾಗುವ ಸಂಭವ ಇದೆ.
ಉಳಿದ ಸ್ಥಳಗಳಲ್ಲಿ ಒಣಹವೆ ಇರಲಿದೆ. ಉತ್ತರ ಒಳನಾಡಿನ ಒಂದೆರಡು ಸ್ಥಳಗಳಲ್ಲಿ ಮಂಜು ಮುಸುಕಿದ ವಾತಾವರಣ ಇರಲಿದ್ದು, ಮಂಗಳವಾರದಿಂದ ಬಹುತೇಕ ಭಾಗದಲ್ಲಿ ಒಣಹವೆ ಇರುತ್ತದೆ ಎಂದು ಹೇಳಲಾಗಿದೆ.