
ಬೆಂಗಳೂರು: ರಾಜ್ಯದಲ್ಲಿ ಇತ್ತೀಚೆಗೆ ವಿಜಯನಗರ ಜಿಲ್ಲೆಯನ್ನು ರಚಿಸಲಾಗಿದ್ದು, ಇದರೊಂದಿಗೆ ಜಿಲ್ಲೆಗಳ ಸಂಖ್ಯೆ 31 ಕ್ಕೆ ಏರಿಕೆಯಾಗಿದೆ. ಶೀಘ್ರವೇ ರಾಜ್ಯದಲ್ಲಿ 3 -4 ಹೊಸ ಜಿಲ್ಲೆಗಳನ್ನು ರಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಉತ್ತರ ಕರ್ನಾಟಕ ಜಿಲ್ಲೆಯ ಶಿರಸಿ, ಬೀದರ್ ಜಿಲ್ಲೆಯ ಬಸವಕಲ್ಯಾಣ, ತುಮಕೂರು ಜಿಲ್ಲೆಯ ತಿಪಟೂರು ಅಥವಾ ಮಧುಗಿರಿ, ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಬೆಳಗಾವಿ ಜಿಲ್ಲೆಯ ಗೋಕಾಕ್ ಅಥವಾ ಚಿಕ್ಕೋಡಿ ಜಿಲ್ಲೆಗಳನ್ನು ರಚಿಸುವ ಕುರಿತಂತೆ ಚರ್ಚೆ ನಡೆದಿದೆ ಎನ್ನಲಾಗಿದ್ದು, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ ಹೊಸ ಜಿಲ್ಲೆಗಳನ್ನು ರಚಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಆಡಳಿತ ಪಕ್ಷದ ಶಾಸಕರಿಂದಲೂ ವಿರೋಧ ವ್ಯಕ್ತವಾದರೂ, ನೂತನ ವಿಜಯನಗರ ಜಿಲ್ಲೆಯನ್ನು ರಚಿಸಲಾಗಿದೆ. ಅದೇ ರೀತಿ ಹೊಸ ಜಿಲ್ಲೆಗಳ ರಚನೆ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ತೀರ್ಮಾನ ಕೈಗೊಳ್ಳಲಾಗುವುದು ಎನ್ನಲಾಗಿದೆ.