ಬೆಂಗಳೂರು: ಬೆಂಗಳೂರು, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ 9ಕ್ಕೂ ಅಧಿಕ ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗಿದ್ದು, ಸಿಡಿಲು ಬಡಿದು ಮೂವರು ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಸುಬ್ರಹ್ಮಣ್ಯ ಗ್ರಾಮದಲ್ಲಿ ಸೋಮಸುಂದರ್(34) ಎಂಬುವರು ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮನೆ ಅಂಗಳದಲ್ಲಿ ಒಣಗಿಸಲು ಹಾಕಿದ್ದ ಅಡಿಕೆ ರಾಶಿ ಮಾಡುವಾಗ ಸಿಡಿಲು ಪಡೆದು ಅವರು ಮೃತಪಟ್ಟಿದ್ದಾರೆ. 10 ದಿನಗಳ ಹಿಂದೆಯಷ್ಟೇ ಅವರ ಮದುವೆಯಾಗಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲೂಕಿನಲ್ಲಿ ಕುರಿ ಮೇಯಿಸಲು ತೆರಳಿದ್ದ ರತ್ನಮ್ಮ(55) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಬೆಟ್ಟಗೇರಿಯಲ್ಲಿ ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಪ್ರಮಾತ್ ಗರ್ಮಾನಿ(37) ಎಂಬುವರು ಮೃತಪಟ್ಟಿದ್ದಾರೆ. ರಾಮನಗರ, ಕೋಲಾರ, ಚಾಮರಾಜನಗರ, ಕೊಡಗು ಸೇರಿ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ಮಳೆಯಾಗಿದೆ.