ಬಳ್ಳಾರಿ: ಬಳ್ಳಾರಿ ವಿಭಜನೆ ಮಾಡಿ ವಿಜಯನಗರ ನೂತನ ಜಿಲ್ಲೆ ರಚನೆ ವಿರೋಧಿಸಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ, ವಿವಿಧ ಸಂಘಟನೆಗಳು, ರೈತಪರ ಸಂಘಟನೆಗಳು, ಕನ್ನಡಪರ ಸಂಘಟನಾಕಾರರು, ವಿವಿಧ ರಾಜಕೀಯ ಮುಖಂಡರು ಮತ್ತು ವಿವಿಧ ಸಾಮಾಜಿಕ ಹೋರಾಟ ಸಂಘಟನೆಗಳ ಮುಖಂಡರು ನ.26 ರ ಇಂದು ಬಳ್ಳಾರಿ ಬಂದ್ ಹಮ್ಮಿಕೊಂಡಿವೆ.
ಬಂದ್ ಬೆಂಬಲಿಸಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ವಾಹನ ಸಂಚಾರ ಸ್ಥಗಿತಗೊಂಡಿದೆ. ಬಂದ್ ಗೆ ಹೆಚ್ಚಿನ ಬೆಂಬಲ ಕಂಡು ಬಂದಿದೆ ಎನ್ನಲಾಗಿದೆ. ಬಂದ್ ಹಿನ್ನೆಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಗತ್ಯ ಮುನ್ನಚ್ಚೆರಿಕಾ ಕ್ರಮಗಳು ಮತ್ತು ಬಂದೋಬಸ್ತ್ ಕೈಗೊಂಡಿದೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಲ್ಲಿ ಅಗತ್ಯವಾದ ಪೊಲೀಸ್ ಅಧಿಕಾರಿ/ಸಿಬ್ಬಂದಿಯನ್ನು ಆಯಾಕಟ್ಟಿನ ಸ್ಥಳಗಳಲ್ಲಿ 3 ಜನ ಡಿಎಸ್‍ಪಿ, 10 ಸಿಪಿಐ/ಪಿಐ,18 ಪಿಎಸ್‍ಐ, 40 ಎ.ಎಸ್.ಐ., 200 ಹೆಚ್.ಸಿ/ಪಿ.ಸಿ., 3 ಡಿಎಆರ್ ತುಕಡಿ ನೇಮಿಸಿಕೊಳ್ಳಲಾಗಿದೆ ಎಂದು ಎಸ್ಪಿ ಸೈದುಲು ಅಡಾವತ್ ಅವರು ತಿಳಿಸಿದ್ದಾರೆ.
ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆಯನ್ನು ಶಾಂತರೀತಿಯಲ್ಲಿ ಕೈಗೊಳ್ಳುವುದು, ಬಂದ್ ಮಾಡುವಂತೆ ಯಾವುದೇ ವ್ಯಕ್ತಿಯಾಗಲೀ ಯಾವುದೇ ಸಂಘಟನೆಯಾಗಲೀ ಯಾರನ್ನೂ ಒತ್ತಾಯಿಸುವಂತಿಲ್ಲ. ಯಾವುದೇ ರೀತಿಯ ಸಾರ್ವಜನಿಕ ಮತ್ತು ಸರ್ಕಾರದ ಆಸ್ತಿಗಳಿಗೆ ಧಕ್ಕೆಯಾಗದಂತೆ ಹಾಗೂ ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕಾನೂನಿನ ಚೌಕಟ್ಟಿನಲ್ಲಿ ಮುಷ್ಕರ ಕೈಗೊಳ್ಳಲು ಸೂಚಿಸಲಾಗಿದೆ. ಯಾವುದೇ ರೀತಿಯ ಕಾನೂನು ಉಲ್ಲಂಘನೆಯಾದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.