ಬಳ್ಳಾರಿ: ಪ್ರಸ್ತಕ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಬೆಂಗಳೂರಿನ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿಯಮಿತ, ಬಳ್ಳಾರಿ ಶಾಖೆ ವತಿಯಿಂದ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಉತ್ಪನ್ನ ಖರೀದಿಸಲಾಗುತ್ತಿದೆ ಎಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರವು ನಿಗದಿಪಡಿಸಿದ ಬೆಂಬಲ ಬೆಲೆಯಂತೆ ಪ್ರತಿ ಕ್ವಿಂಟಾಲ್‌ಗೆ 7550 ರೂ. ರಂತೆ ರೈತರಿಂದ ಖರೀದಿಸಲಾಗುತ್ತದೆ. ಬಳ್ಳಾರಿ ನಗರದ ಎಸ್‌ಪಿ ವೃತ್ತದ ಹತ್ತಿರದ ಮಾರುತಿ ನಗರದ 2ನೇ ಕ್ರಾಸ್‌ನ ರೈತರ ಸೇವಾ ಸಹಕಾರ ಸಂಘ ನಿಯಮಿತವು ಖರೀದಿ ಕೇಂದ್ರವಾಗಿದೆ.(ದೂ.08392-2200202)
ಬೇಕಾದ ದಾಖಲೆ:
ಆಧಾರ್ ಕಾರ್ಡ್, ಪ್ರಸ್ತಕ ಸಾಲಿನ ಪಹಣಿ ಪತ್ರ, ಎಫ್‌ಐಡಿ ಕಡ್ಡಾಯ, ರೈತರು ತಮ್ಮ ಹೆಸರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಹೆಸರು ನೋಂದಾಯಿಸಿರಬೇಕು. ಬ್ಯಾಂಕ್ ಖಾತೆ ಪುಸ್ತಕದ ನಕಲು ಪ್ರತಿ.
ರೈತರಲ್ಲಿ ಫ್ರೂಟ್ಸ್ ಐಡಿ ಇಲ್ಲದೇ ಇದ್ದಲ್ಲಿ ಅಥವಾ ಫ್ರೂಟ್ಸ್ ನಲ್ಲಿ ಯಾವುದಾದರೂ ತಾಂತ್ರಿಕ ದೋಷವಿದ್ದಲ್ಲಿ ರೈತರು ಕೃಷಿ ಇಲಾಖೆ ಸಂಪರ್ಕಿಸಿ ಅವಶ್ಯಕ ಮಾಹಿತಿ ಪಡೆಯಬಹುದು.
ಒಣಗಿದ ಹಾಗೂ ಸ್ವಚ್ಛ ಎಫ್‌ಎಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಕೇಂದ್ರಕ್ಕೆ ಮಾರಾಟ ಮಾಡಲು ತರಬೇಕು. ತೊಗರಿ ಖರೀದಿ ಕೇಂದ್ರಗಳಲ್ಲಿ ರೈತರು ತಮ್ಮ ಹೆಸರನ್ನು ಜ.2 ರಿಂದ 75 ದಿನಗಳೊಳಗೆ ನೋಂದಾಯಿಸಿಕೊಳ್ಳಬೇಕು ಹಾಗೂ ನೋಂದಣಿ ಚೀಟಿ ಪಡೆಯಬೇಕು.
ನಿಗಧಿತ ಅವಧಿಯೊಳಗೆ ನೋಂದಾಯಿಸಿಕೊಂಡ ರೈತರಿಂದ ಪ್ರತಿ ಎಕರೆಗೆ 4 ಕ್ವಿಂಟಾಲ್‌ನಿಂದ ಗರಿಷ್ಠ 40 ಕ್ವಿಂಟಾಲ್ ಮಾತ್ರ ಖರೀದಿಸಲಾಗುವುದು. ತೊಗರಿ ಉತ್ಪನ್ನವನ್ನು 90 ದಿನಗಳವರೆಗೆ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಖರೀದಿಸಲಾಗುತ್ತದೆ.
ರೈತರು ಮಧ್ಯವರ್ತಿಗಳ ಮೊರೆ ಹೋಗಬಾರದು, ರೈತರೇ ನೇರವಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.