ಧಾರವಾಡ : ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜೀವನೋಪಾಯ ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯಿಂದ ಇಂದು (ಮಾ.9) ಕೆಸಿಡಿ ಆವರಣದಲ್ಲಿ ಆಯೋಜಿಸಿದ್ದ ಉದ್ಯೋಗ ಮೇಳ ಯಶಸ್ವಿಯಾಗಿದ್ದು, ಉದ್ಯೋಗದಾತರಿಂದ ಮತ್ತು ಉದ್ಯೋಗ ಆಕಾಂಕ್ಚಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ಜಿಲ್ಲಾಧಿಕಾರಿ ದಿವ್ಯ ಪ್ರಭು ಮತ್ತು ಜಿ.ಸಿಇಓ ಭುವನೇಶ ಪಾಟೀಲ ಅವರು ಕಳೆದ ಒಂದು ವಾರದಿಂದ ನೇರ ಉಸ್ತುವಾರಿಯಲ್ಲಿ ಉದ್ಯೋಗ ಮೇಳವನ್ನು ಶಿಸ್ತುಬದ್ಧವಾಗಿ ರೂಪಿಸಿದ್ದು ಸಾರ್ಥಕವೆನಿಸಿತು.
ಬೆಂಗಳೂರು, ಮೈಸೂರು, ಬೆಳಗಾವಿ ಮತ್ತು ಹುಬ್ಬಳ್ಳಿ ಧಾರವಾಡದ ವಿವಿಧ ಕೈಗಾರಿಕಾ ವಲಯಗಳಿಂದ ಸಂದರ್ಶನ ತೆಗೆದುಕೊಳ್ಳಲು ಆಗಮಿಸಿದ ಇನ್ಪೊಸಿಸ್, ಟಾಟಾ ಮಾರ್ಕೊಪೆÇೀಲೊ, ಟಾಟಾ ಮೋಟಾರ್ಸ್, ಎಕಸ್, ಯುಪ್ಲೇಕ್ಸ್, ಎಚ್.ಸಿ.ಎಲ್ ಟೆಕ್, ಸಾಯಿ ಗಾಮೆರ್ಂಟ್ಸ್, ಮೈಕ್ರೊ ಪಿನಿಷವಾಲ್, ಎಕ್ಸಲ್ ಪುಡ್ ಪ್ರೈ.ಲಿ., ಕ್ಯಾನನ್ ಇಂಟರನ್ಯಾಶನಲ್ ಸೇರಿದಂತೆ 130 ಕ್ಕೂ ಹೆಚ್ಚು ಕೈಗಾರಿಕಾ ಕಂಪನಿಗಳಿಂದ ಆಗಮಿಸಿದ್ದ ಅಧಿಕಾರಿ, ಸಿಬ್ಬಂದಿಗಳು ಯೋಜನಾಬದ್ದಬಾಗಿ ಮತ್ತು ಯಾವುದೇ ನೂಕುನುಗ್ಗಲು ಉಂಟಾಗದಂತೆ ವ್ಯವಸ್ಥಿತವಾಗಿ ಉದ್ಯೋಗಮೇಳವನ್ನು ಆಯೋಜಿಸಿದ್ದನ್ನು ಕಂಡು ಸಂತೋಷ ವ್ಯಕ್ತಪಡಿಸಿದರು.
ವಿಕಲಚೇತನರಿಗೆ ಉದ್ಯೋಗದಲ್ಲಿ ಆದ್ಯತೆ ಸೀಗಬೇಕೆಂದು ಗೋಕಾಕ ಗ್ರಂಥಾಲಯದ 24/7 ಓದುವ ಕೊಠಡಿಯಲ್ಲಿ ಅವರಿಗಾಗಿ ಪ್ರತ್ಯೇಕವಾಗಿ ಸಂದರ್ಶನ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಕಂಪನಿಗಳು 300 ಕ್ಕೂ ಹೆಚ್ವು ಜನರಿಗೆ ಸಂದರ್ಶನ ಮಾಡಿ, ದಾಖಲೆಗಳನ್ನು ಪಡೆದು, ಮುಂದಿನ ಹಂತಕ್ಕಾಗಿ ತಮ್ಮ ಕೈಗಾರಿಕಾ ಕಚೇರಿಗೆ ಬರಲು ಸುಮಾರು 80 ಜನ ವಿಕಲಚೇತನರಿಗೆ ಆಫರ್ ಲೇಟರ್ ನೀಡಿದರು.
ಕಳೆದ ಸಾಲಿನಲ್ಲಿ ಮತ್ತು ಪ್ರಸಕ್ತ ಸಾಲಿನ ಕೊನೆಯ ಸೆಮಿಸ್ಟರ್ದಲ್ಲಿ ಓದುತ್ತಿರುವ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗವಹಿಸಿ, ತಮ್ಮ ಭವಿಷ್ಯದ ಉದ್ಯೋಗದ ಬಗ್ಗೆ, ಸಂದರ್ಶನ ಅನುಭವದ ಬಗ್ಗೆ ಸಂತಸ ವ್ಯಕ್ತಪಡಿಸಿದರು.ಇಂದಿನ ಉದ್ಯೋಗಮೇಳದಲ್ಲಿ 98 ಕೈಗಾರಿಕೆಗಳು ಸೇರಿ ಸುಮಾರು 118 ಕ್ಕೂ ಹೆಚ್ಚು ಕಂಪನಿಗಳು, ಉದ್ಯೋಗದಾತರು ಭಾಗವಹಿಸಿದ್ದರು. ಧಾರವಾಡ, ಗದಗ, ಹಾವೇರಿ, ಬೆಳಗಾವಿಯಿಂದ ಆಗಮಿಸಿದ್ದ ಸುಮಾರು 5,821 ಉದ್ಯೋಗ ಆಕಾಂಕ್ಷಿ ಅಭ್ಯರ್ಥಿಗಳು ಸಂದರ್ಶನ ನೀಡಿದರು. ಕೆಲವರು ನೋಂದಣಿ ಮಾಡಿಯೂ, ಸಂದರ್ಶನ ನೀಡದೆ ಕೈಗಾರಿಕೆ, ಕಂಪನಿಗಳ ಮಾಹಿತಿ ಪಡೆದುಕೊಂಡರು.
ಒಟ್ಟಾರೆ ಸಂದರ್ಶನ ನೀಡಿದ್ದ 5,821 ಅಭ್ಯರ್ಥಿಗಳ ಪೈಕಿ 3,149 ಅಭ್ಯರ್ಥಿಗಳಿಗೆ ವಿವಿಧ ಕಂಪನಿಗಳು ಶಾರ್ಟ ಲಿಸ್ಟ್ ಮಾಡಿಕೊಂಡು ಆಫರ್ ಲೇಟರ್ ನೀಡಿವೆ. ಮತ್ತು 532 ಉದ್ಯೋಗ ಆಕಾಂಕ್ಷಗಳಿಗೆ ವಿವಿಧ ಕಂಪನಿ, ಕೈಗಾರಿಕೆಗಳು ನೇಮಕಾತಿ ಪತ್ರ ನೀಡಿವೆ. ಒಟ್ಟಾರೆಯಾಗಿ ಉದ್ಯೋಗಕ್ಕಾಗಿ ಶಾರ್ಟ ಲಿಸ್ಟ್ ಆಗಿರುವ ಮತ್ತು ನೇಮಕಾತಿ ಆದೇಶ ಪಡೆದಿರುವವರು ಆಗಿದ್ದು, ಶೇ.64 ಪ್ರತಿ ಶತ ಸಾಧನೆ ಆಗಿದೆ. ಉದ್ಯೋಗ ಮೇಳಕ್ಕೆ ನೋಂದಾಯಿತರಾಗಿದ್ದ ಸುಮಾರು 3000 ಜನ ಉದ್ಯೋಗ ಆಕಾಂಕ್ಷಿಗಳು, ಸಂದರ್ಶನಕ್ಕೆ ಹಾಜರಾಗದೆ, ಅವರ ಪಾಲಕರೊಂದಿಗೆ ಉದ್ಯೋಗಮೇಳಕ್ಕೆ ಭೇಟಿ ನೀಡಿ, ವಿವಿಧ ಕೈಗಾರಿಕೆ, ಕಂಪನಿಗಳಲ್ಲಿನ ಉದ್ಯೋಗ ಅವಕಾಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉದ್ಯೋಗಮೇಳ ಕುರಿತು ಹಿರಿಯ ಅಧಿಕಾರಿಗಳ, ಸಂಘಟಕರ ಅಭಿಪ್ರಾಯಗಳು:
ಸರಕಾರದ ನಿರ್ದೇಶನದಂತೆ ಉದ್ಯೋಗ ಮೇಳ ಆಯೋಜಿಸಿ, ನಿರುದ್ಯೋಗಿ ಅರ್ಹ ಯುವಕ, ಯುವತಿಯರಿಗೆ ಅವರ ಬೇಡಿಕೆಗೆ ಅನುಗುಣವಾಗಿ ಉದ್ಯೋಗ ಕಲ್ಪಿಸುವ ಮತ್ತು ಅವಳಿ ನಗರಕ್ಕೆ ಆಗಮಿಸಿರುವ ಮತ್ತು ಮುಂದಿನ ದಿನಗಳಲ್ಲಿ ಬರಲಿರುವ ಉದ್ಯಮಿಗಳಿಗೆ ಕೌಶಲ್ಯಯುತ ಮತ್ತು ಅಗತ್ಯ ಮಾನವ ಸಂಪನ್ಮೂಲ ನಮ್ಮ ಜಿಲ್ಲೆಯಲ್ಲಿ ಲಭ್ಯವಿದೆ ಎಂಬುದನ್ನು ತೋರಿಸಲಾಗಿದೆ. ಅವರಿಗೆ ಬಂಡವಾಳ ಹೂಡಿ, ಉದ್ಯೋಗ ಸೃಷ್ಟಿಸಬಹುದು ಎಂಬ ಭರವಸೆ ಮೂಡಿಸುವ ನಿಟ್ಟಿನಲ್ಲಿ ಈ ಉದ್ಯೋಗಮೇಳದಲ್ಲಿ ಯಶಸ್ವಿಯಾಗಿದ್ದೇವೆ. ಜಿಲ್ಲಾಡಳಿತ ಆಯೋಜಿಸಿದ್ದ ಪ್ರಥಮ ಉದ್ಯೋಗಮೇಳದಲ್ಲಿ ಭಾಗವಹಿಸಿದ್ದವರ ಪೈಕಿ ಸುಮಾರು ಶೇ.64 ರಷ್ಟು ಜನರಿಗೆ ಆಫರ್ ಲೇಟರ್, ನೇಮಕಾತಿ ಆದೇಶ ಸಿಕ್ಕಿರುವುದು ಸಂತಸ ತಂದಿದೆ. ಜಿಲ್ಲೆಯ ಯುವಕ, ಯುವತಿಯರಿಗೆ ಇನ್ನು ಹೆಚ್ಚುಹೆಚ್ಚು ಉದ್ಯೋಗ ದೊರಕಿಸುವಲ್ಲಿ ಕಾರ್ಯಕ್ರಮಗಳನ್ನು ಜಿಲ್ಲಾಡಳಿತದಿಂದ ಆಯೋಜಿಸಲಾಗುತ್ತದೆ.