ಬೆಂಗಳೂರು: ಭಾರಿ ಬಿಸಿಲು, ಅಧಿಕ ತಾಪಮಾನ ಇರುವುದರಿಂದ ಮತ ಕೇಂದ್ರಗಳಲ್ಲಿ ವೈದ್ಯಕೀಯ ಚಿಕಿತ್ಸೆಗೆ ಸಂಬಂಧಿಸಿದಂತೆ ಅಗತ್ಯ ವ್ಯವಸ್ಥೆ ಮಾಡಿಕೊಳ್ಳಲು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ಆರೋಗ್ಯ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಆರೋಗ್ಯ ಇಲಾಖೆ ಆಯುಕ್ತ ಡಿ. ರಂದೀಪ್ ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ಲೋಕಸಭೆ ಚುನಾವಣೆ ಮತದಾನ ಏಪ್ರಿಲ್, ಮೇ ತಿಂಗಳಲ್ಲಿ ನಡೆಯಲಿದೆ. ಈ ಅವಧಿಯಲ್ಲಿ ಉಷ್ಣಾಂಶ ಹೆಚ್ಚಾಗಿರುತ್ತದೆ. ಅಧಿಕ ತಾಪಮಾನ, ಶಾಖದಿಂದ ಸಂಭವಿಸುವ ಸಮಸ್ಯೆಗಳ ನಿರ್ವಹಣೆಗೆ ವೈದ್ಯಕೀಯ ಕಿಟ್, ಪರಿಕರಗಳನ್ನು ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಿದ್ದಾರೆ.
ಪ್ರತಿ ಮತ ಕೇಂದ್ರಕ್ಕೂ ಓ.ಆರ್.ಎಸ್. ದ್ರಾವಣ ಒದಗಿಸಬೇಕು. ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸೇವೆಯ ಲಭ್ಯತೆ ಖಚಿತಪಡಿಸಿಕೊಳ್ಳಬೇಕು. ಬಿಸಿಲಿನಿಂದ ರಕ್ಷಣೆ, ಮುನ್ನೆಚ್ಚರಿಕೆ ಕ್ರಮಗಳ ಜಾಗೃತಿ ಕರಪತ್ರಗಳನ್ನು ಹಂಚಬೇಕು ಎಂದು ಹೇಳಿದ್ದಾರೆ.