ಶಿವಮೊಗ್ಗ: ಬ್ಯಾಂಕು ಮತ್ತು ಇನ್ಶೂರೆನ್ಸ್ ಕಂಪನಿ ವಿರುದ್ದ ಸೇವಾನ್ಯೂನ್ಯತೆ ಕುರಿತು ದಾಖಲಿಸಿದ್ದ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರ ಪೀಠವು ಅರ್ಜಿದಾರರಿಗೆ ಪರಿಹಾರ ಒದಗಿಸುವಂತೆ ಆದೇಶಿಸಿದೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೇಕೆರೆ ಗ್ರಾಮದ ಪುರ್ವಾನಾಯ್ಕ್ ಎಂಬುವವರು 1ನೇ ಎದುರುದಾರರಾದ ಬ್ಯಾಂಕ್ ಆಫ್ ಬರೋಡ ತೀರ್ಥಹಳ್ಳಿ ಮತ್ತು 2ನೇ ಎದುರುದಾರರಾದ ಟಾಟಾ ಎ.ಐ.ಜಿ ಜನರಲ್ ಇನ್ಸೂರೆನ್ಸ್ ಕಂಪನಿ ಲಿ ಎಂಬುವವರ ವಿರುದ್ಧ ಸೇವಾನ್ಯೂನ್ಯತೆ ಕುರಿತು ಆಪಾದಿಸಿ ಪ್ರಕರಣ ದಾಖಲಿಸಿದ್ದರು.
ಅರ್ಜಿದಾರರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹೊನ್ನೇಕೆರೆಯಲ್ಲಿ 2 ಎಕರೆ ಜಮೀನನ್ನು ಹೊಂದಿದ್ದು, 2017 ರಲ್ಲಿ ಬ್ಯಾಂಕ್ ಆಫ್ ಬರೋಡಾದವರಿಂದ ಸಾಲ ಪಡೆದು ಇಲ್ಲಿ ಒಂದು ಕಟ್ಟಡವನ್ನು ನಿರ್ಮಿಸಿರುತ್ತಾರೆ. ಈ ಕಟ್ಟಡಕ್ಕೆ 2ನೇ ಎದುರುದಾರರಾದ ವಿಮಾ ಕಂಪನಿಯವರಿಂದ ದಿನಾಂಕ:22.03.2021 ರಲ್ಲಿ ಪ್ರಿಮಿಯಮ್ ಮೊತ್ತವನ್ನು ಪಾವತಿಸಿ ಪಾಲಿಸಿಯನ್ನು ಕೂಡ ಪಡೆದಿದ್ದು ದಿ: 28.02.2022 ರಂದು ಈ ಕಟ್ಟಡವು ಗುಡುಗು ಮತ್ತು ಸಿಡಿಲಿನ ಹೊಡೆತದಿಂದಾಗಿ ಹಾನಿಗೊಳಗಾಗಿರುತ್ತದೆ.
ಅರ್ಜಿದಾರರು 1 ಮತ್ತು 2ನೇ ಎದುರುದಾರರನ್ನು ಸಂಪರ್ಕಿಸಿ ಕಟ್ಟಡಕ್ಕೆ ಉಂಟಾದ ಹಾನಿಗೆ ಸಂಬಂಧಿಸಿದಂತೆ, ಇಂಜಿನಿಯರ್ ನೀಡಿರುವ ಅಂದಾಜು ಪಟ್ಟಿ ಪ್ರಕಾರ ರೂ.18,15,000/-ಗಳನ್ನು ವಿಮಾ ಪರಿಹಾರವಾಗಿ ಪಾವತಿಸುವಂತೆ ಕೋರಿರುತ್ತಾರೆ. ಆದರೆ 2ನೇ ಎದುರುದಾರರು ವಿಮಾ ಕಂಪನಿಯವರು ಈ ಕಟ್ಟಡವನ್ನು ಫಿರ್ಯಾದಿದಾರರು ಕೋಳಿ ಸಾಕಾಣಿಕೆಗೆ ಮತ್ತು ಆಹಾರ ಸಂಗ್ರಹಣೆಗೆ ಬಳಸಿದ್ದರಿಂದ ಮತ್ತು ಆ ರೀತಿಯ ಕಟ್ಟಡದ ಬಳಕೆಯು ವಿಮಾ ಪಾಲಿಸಿಯ ಷರತ್ತು ಮತ್ತು ನಿಬಂಧನೆಗಳ ಉಲ್ಲಂಘನೆಯಾಗಿರುವುದರಿಂದ ವಿಮಾ ಪರಿಹಾರವನ್ನು ನೀಡಲಾಗುವುದಿಲ್ಲ ಎಂದು ಅರ್ಜಿಯನ್ನು ತಿರಸ್ಕರಿಸಿರುತ್ತಾರೆ.
ಪ್ರಕರಣದ ಅಂಶಗಳು, ಎದುರುದಾರರ ಹೇಳಿಕೆಗಳು ಉಭಯ ಪಕ್ಷೇತರರು ಹಾಜರುಪಡಿಸಿದ ಎಲ್ಲಾ ಸೂಕ್ತ ದಾಖಲೆಗಳನ್ನು ಆಯೋಗವು ಕುಲಂಕುಶವಾಗಿ ಪರಿಶೀಲಿಸಿ 1ನೇ ಎದುರುದಾರರು ಫರ್ಯಾದಿದಾರರು ನಿರ್ಮಿಸಿರುವ ಕಟ್ಟಡಕ್ಕೆ ಆರ್ಥಿಕ ಸಹಾಯವನ್ನು ಮಾತ್ರ ಮಾಡಿದವರಾಗಿದ್ದು, 2ನೇ ಎದುರುದಾರರಾದ ವಿಮಾ ಕಂಪನಿಯವರು ಈ ಕಟ್ಟಡಕ್ಕೆ ವಿಮಾ ಪಾಲಿಸಿಯನ್ನು ನೀಡಿದವರಾಗಿರುವುದರಿಂದ, ಕಟ್ಟಡದ ಹಾನಿಗೆ ಸಂಬಂಧಿಸಿದಂತೆ 18,15,000 ರೂ.-ಗಳ ವಿಮಾ ಪರಿಹಾರ ಮೊತ್ತವನ್ನು ಪಾವತಿಸಲು ಬಾಧ್ಯರಾಗಿರುತ್ತಾರೆ ಎಂದು ತೀರ್ಮಾನಿಸಿರುತ್ತದೆ. ಹಾಗೂ ವಿಮಾ ಕಂಪನಿಯವರು ಕೇವಲ ತಾಂತ್ರಿಕ ಅಂಶಗಳ ಆಧಾರದ ಮೇಲೆ ವಿಮಾ ಪರಿಹಾರವನ್ನು ನಿರಾಕರಿಸುವಂತಿಲ್ಲವೆಂದು ಆದೇಶಿಸಿ ಪ್ರಕರಣವನ್ನು ಭಾಗಶಃ ಪುರಸ್ಕರಿಸಿರುತ್ತದೆ.
ವಿಮಾ ಕಂಪನಿಯವರು ಫಿರ್ಯಾದುದಾರರಿಗೆ ವಿಮಾ ಪರಿಹಾರ 18,15,000 ರೂ.ಗಳನ್ನು ವಾರ್ಷಿಕ ಶೇ.6 ಬಡ್ಡಿಯೊಂದಿಗೆ ಮರು ಪಾವತಿಸಬೇಕೆಂದು ಮತ್ತು 5,000 ರೂ.ಗಳನ್ನು ಮಾನಸಿಕ ಹಾನಿಗೆ ಸಂಬಂಧಿಸಿದಂತೆ ಹಾಗೂ 10,000 ರೂ. ವ್ಯಾಜ್ಯದ ಖರ್ಚು ವೆಚ್ಚಗಳ ಬಾಬ್ತನ್ನು ಈ ಆದೇಶವಾದ 45 ದಿನದೊಳಗಾಗಿ ಪಾವತಿಸಬೇಕೆಂದು ನಿರ್ದೇಶಿಸಿ, ಶಿವಮೊಗ್ಗ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಟಿ. ಶಿವಣ್ಣ, ಮಹಿಳಾ ಸದಸ್ಯೆ ಸವಿತಾ ಬಿ. ಪಟ್ಟಣಶೆಟ್ಟಿ ಮತ್ತು ಸದಸ್ಯ ಬಿ.ಡಿ ಯೋಗಾನಂದ ಭಾಂಡ್ಯ ಇವರ ಪೀಠವು ಆದೇಶಿಸಿದೆ.