alex Certify ಪಡಿತರ ಚೀಟಿದಾರರಿಗೆ ತೂಕದಲ್ಲಿ ವಂಚನೆ: ನ್ಯಾಯಬೆಲೆ ಅಂಗಡಿ ಅಮಾನತಿಗೆ ಸ್ಥಳದಲ್ಲೇ ಡಿಸಿ ಆದೇಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಡಿತರ ಚೀಟಿದಾರರಿಗೆ ತೂಕದಲ್ಲಿ ವಂಚನೆ: ನ್ಯಾಯಬೆಲೆ ಅಂಗಡಿ ಅಮಾನತಿಗೆ ಸ್ಥಳದಲ್ಲೇ ಡಿಸಿ ಆದೇಶ

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿಯಲ್ಲಿನ ಸರ್ಕಾರಿ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರಿಗೆ ತೂಕದಲ್ಲಿ ವಂಚನೆ ಮಾಡಿದ ಪ್ರಕರಣದಡಿ ಸ್ಥಳದಲ್ಲೆ ನ್ಯಾಯಬೆಲೆ ಅಂಗಡಿ ಅಮಾನತು ಮಾಡಲು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶ ನೀಡಿದ್ದಾರೆ.

ಜಿಲ್ಲಾಧಿಕಾರಿಯವರು ಆಗಸ್ಟ್ 31 ರಂದು ಹೊನ್ನಾಳಿಗೆ ಭೇಟಿ ನೀಡಿ ದುರಸ್ಥಿಯಾದ ಕಾಲುವೆ ವೀಕ್ಷಣೆಯಾಗಿ ಬಸವನಹಳ್ಳಿ ಮಾರ್ಗವಾಗಿ ತೆರಳಿದ್ದಾರೆ. ಅಲ್ಲಿ ನ್ಯಾಯಬೆಲೆ ಅಂಗಡಿ ನೋಡಿದ ಜಿಲ್ಲಾಧಿಕಾರಿಯವರು ತಮ್ಮ ವಾಹನ ನಿಲ್ಲಿಸಿ ಅಂಗಡಿಗೆ ತೆರಳಿದಾಗ ಅಲ್ಲಿ ಓರ್ವ ಮಹಿಳೆ ಪಡಿತರ ಧಾನ್ಯಗಳನ್ನು ಪಡೆದುಕೊಂಡಿದ್ದರು. ಅವರನ್ನು ಮಾತನಾಡಿಸಿ ನಿಮ್ಮ ಮನೆಯಲ್ಲಿ ಎಷ್ಟು ಸದಸ್ಯರಿದ್ದಾರೆ, ಎಷ್ಟು ಆಹಾರಧಾನ್ಯ ನೀಡುತ್ತಿದ್ದಾರೆ ಎಂದು ಮಾಹಿತಿ ಪಡೆದುಕೊಂಡರು. ಮಹಿಳೆ ಮೂರು ಕೆ.ಜಿ.ಅಕ್ಕಿ ಹಾಗೂ 2 ಕೆ.ಜಿ ರಾಗಿ ಪಡೆಯಲಾಗಿದೆ ಎಂದಾಗ ತೂಕದ ನಿಖರತೆ ಪರೀಕ್ಷೆ ಮಾಡಲು ಮರು ತೂಕ ಮಾಡಲು ತಿಳಿಸಿದರು.

ಒಟ್ಟು ಆಹಾರ ಧಾನ್ಯ ಐದು ಕೆಜಿ ನೀಡಬೇಕಿದ್ದು ಇದು 4 ಕೆಜಿ 300 ಗ್ರಾಂ ತೂಕ ಮಾತ್ರ ಬಂದಿದೆ. ಪಡಿತರರಿಗೆ 700 ಗ್ರಾಂ ತೂಕದಲ್ಲಿ ಮೋಸ ಮಾಡಲಾಗಿದೆ ಎಂದು ಅರಿತ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿಯವರು ಸ್ಥಳದಲ್ಲಿಯೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿ ಈ ನ್ಯಾಯಬೆಲೆ ಅಂಗಡಿಯನ್ನು ಅಮಾನತು ಮಾಡಲು ಸೂಚನೆ ನೀಡಿದರು.

ಈ ವೇಳೆ ಹೊನ್ನಾಳಿ ಉಪವಿಭಾಗಾಧಿಕಾರಿ ಅಭಿಷೇಕ್ ಹಾಗೂ ತಹಶೀಲ್ದಾರ್ ಉಪಸ್ಥಿತರಿದ್ದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...