ಉಡುಪಿ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಪಿ.ಯು.ಸಿ ನಂತರ ಉನ್ನತ ವಿಧ್ಯಾಬ್ಯಾಸ ಮಾಡಲು ಅನೇಕ ಕೋರ್ಸುಗಳು ಲಭ್ಯವಿದ್ದು, ಉನ್ನತ ವಿಧ್ಯಾಬ್ಯಾಸ ಬಯಸುವ ನೌಕರರು, ಖಾಸಗಿ ಕೆಲಸ ನಿರ್ವಹಿಸುವ ಶ್ರಮಿಕ ವರ್ಗಗಳು, ಮನೆಯಲ್ಲಿ ಇರುವ ಗೃಹಿಣಿಯರು, ಕಾಲೇಜಿಗೆ ಹೋಗಲು ಆಗದವರು ಹೀಗೆ ಪ್ರತಿಯೊಬ್ಬರು ದೂರ ಶಿಕ್ಷಣದ ಮೂಲಕ ಉನ್ನತ ಪದವಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ ಹೇಳಿದರು.
ಅವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಪ್ರಸಕ್ತ ಜುಲೈ ಶೈಕ್ಷಣಿಕ ಸಾಲಿನ ಪ್ರವೇಶಾತಿಗಳ ಕುರಿತು ಮತ್ತು ದೂರ ಶಿಕ್ಷಣದಲ್ಲಿ ಉನ್ನತ ವಿದ್ಯಾಬ್ಯಾಸ ಮಾಡಲು ಲಭ್ಯವಿರುವ ವಿವಿಧ ಕೋರ್ಸ್ಗಳ ಬಗ್ಗೆ ಜನ ಜಾಗೃತಿ ಮೂಡಿಸುವ ಮುಕ್ತ ವಿವಿ ಶೈಕ್ಷಣಿಕ ಪ್ರಚಾರ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ.ರಾ.ಮು.ವಿ.ಯ ಕೋರ್ಸುಗಳು ಬೇರೆ ಸಂಪ್ರಾದಾಯಕ ವಿಶ್ವವಿದ್ಯಾನಿಲಯಕ್ಕೆ ಸರಿ ಸಮಾನವಾದ ಮತ್ತು ದೂರ ಶಿಕ್ಷಣ ನೀಡುವ ರಾಜ್ಯದ ಏಕೈಕ ವಿಶ್ವ ವಿದ್ಯಾಲಯವಾಗಿದ್ದು, ಇಲ್ಲಿ ಪದವಿ ಪಡೆದವರು ಕೆ.ಎ.ಎಸ್ ಮತ್ತು ಐ.ಎ.ಎಸ್ ಮಾಡಬಹುದು. ದೇಶ ವಿದೇಶಗಳಲ್ಲಿ ನೌಕರಿ ಮಾಡಲು ಇದು ಸಹಕಾರಿಯಾಗಿದೆ. ಮುಕ್ತ ವಿವಿಯ ಪ್ರಾದೇಶಿಕ ಕೇಂದ್ರವು ಉಡುಪಿಯಲ್ಲಿರುವದರಿಂದ ಜಿಲ್ಲೆಯ ಉನ್ನತ ಶಿಕ್ಷಣ ವಂಚಿತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಶಾಸಕ ಯಶ್ಪಾಲ್ ಎ ಸುವರ್ಣ ಮುಕ್ತ ವಿ.ವಿ ಶೈಕ್ಷಣಿಕ ಪ್ರಚಾರ ವಾಹನದ ಪ್ರಚಾರ ಕಾರ್ಯವು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಉಡುಪಿ ಪ್ರಾದೇಶಿಕ ನಿರ್ದೇಶಕ ಡಾ. ಕೆ.ಪಿ.ಮಹಾಲಿಂಗು ಕಲ್ಕುಂದ, ಪ್ರಚಾರ ವಾಹನದ ಮ್ಯಾನೇಜರ್ ಸಿದ್ದೇಗೌಡ, ನಗರಸಭೆ ಸದಸ್ಯ ರಮೇಶ್ ಕಾಂಚನ್, ಪ್ರಾದೇಶಿಕ ಕೇಂದ್ರದ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.