ಪವಿತ್ರ ಬೈಬಲ್ ವಿತರಿಸುವುದು, ಒಳ್ಳೆಯ ವಿಚಾರಗಳನ್ನು ಜನತೆಗೆ ತಿಳಿಸುವುದನ್ನು ಮತಾಂತರ ಮಾಡಲು ಪ್ರಚೋದನೆ ಎಂಬುದಾಗಿ ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಕಾನೂನು ಬಾಹಿರ ಮತಾಂತರ ಕಾಯ್ದೆ ಅಡಿ ಬಂಧಿತರಾಗಿದ್ದ ಇಬ್ಬರು ವ್ಯಕ್ತಿಗಳಿಗೆ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ವಿವರ: ಜೋಸ್ ಪಾಪಚ್ಚೆನ್ ಮತ್ತು ಶ್ರೀಜಾ ಎಂಬವರು ಅಂಬೇಡ್ಕರ್ ನಗರ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಾಲೋನಿಯಲ್ಲಿ ಬೈಬಲ್ ವಿತರಿಸುವುದರ ಜೊತೆಗೆ ಕ್ರಿಶ್ಚಿಯನ್ ಧರ್ಮದ ವಿಚಾರಗಳನ್ನು ತಿಳಿಸುವುದರ ಮೂಲಕ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ನಾಯಕರೊಬ್ಬರು ಜನವರಿ 24ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರುಗಳನ್ನು ಬಂಧಿಸಲಾಗಿತ್ತು.
ಪೊಲೀಸರು ಜೋಸ್ ಪಾಪಚ್ಚೆನ್ ಮತ್ತು ಶ್ರೀಜಾ ವಿರುದ್ಧ 2021ರ ಉತ್ತರ ಪ್ರದೇಶ ಮತಾಂತರ ನಿಷೇಧ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಿ, ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಕೋರಿ ಇಬ್ಬರು ಆರೋಪಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಮೀಮ್ ಅಹಮದ್ ನೇತೃತ್ವದ ನ್ಯಾಯಪೀಠ, ಪವಿತ್ರ ಬೈಬಲ್ ವಿತರಿಸುವುದು, ಮದ್ಯಪಾನ ಮಾಡದಂತೆ ತಿಳಿ ಹೇಳುವುದು ಮೊದಲಾದ ಒಳ್ಳೆಯ ವಿಚಾರಗಳನ್ನು ತಿಳಿಸುವುದು ಮತಾಂತರಕ್ಕೆ ಪ್ರಚೋದನೆ ಎಂಬುದಾಗಿ ಪರಿಗಣಿಸಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.