ಬೆಂಗಳೂರು : ಚುನಾವಣೆ ಬಳಿಕ ಕೇಂದ್ರ ಸರ್ಕಾರ ‘ಭಾರತ್ ಬ್ರ್ಯಾಂಡ್ ಅಕ್ಕಿ’ ವಿತರಣೆ ಬಂದ್ ಮಾಡಿದೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಡಾ.ಬಾಬು ಜಗಜೀವನ ರಾಮ್ ಅವರ ಪುಣ್ಯತಿಥಿ ಅಂಗವಾಗಿ ಬಾಬೂಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರ ಆರಂಭಿಸಿದ್ದ ಭಾರತ್ ಬ್ರ್ಯಾಂಡ್ ಅಕ್ಕಿ’ ವಿತರಣೆ ಯೋಜನೆಯನ್ನು ಚುನಾವಣೆ ಬಳಿಕ ನಿಲ್ಲಿಸಿದೆ. ಚುನಾವಣೆಗೋಸ್ಕರ ಈ ಯೋಜನೆ ಜಾರಿಗೆ ತಂದದ್ದು ಎಂದು ನಮಗೆ ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದರು.
ನಾವು ಅನ್ನಭಾಗ್ಯ ಯೋಜನೆಗಾಗಿ ಕೇಂದ್ರದ ಬಳಿ ಅಕ್ಕಿ ಕೇಳಿದರೆ ದಾಸ್ತಾನು ಇಲ್ಲ ಎಂದು ಹೇಳಿದರು. ಇದರಿಂದ ನಾವು ಜನರಿಗೆ ಹೆಚ್ಚುವರಿ ಅಕ್ಕಿ ಬದಲು ಹಣ ನೀಡಬೇಕಾದ ಪರಿಸ್ಥಿತಿ ಉಂಟಾಯಿತು ಎಂದರು.
ಬಾಬೂ ಜಗಜೀವನ್ ರಾಮ್ ಅವರ ಕೊಡುಗೆ ಅನನ್ಯ
ಹಸಿರು ಕ್ರಾಂತಿಯ ಶಿಲ್ಪಿಯಾಗಿ, ಯುದ್ಧಕಾಲದ ಯಶಸ್ವಿ ರಕ್ಷಣಾ ಸಚಿವರಾಗಿ, ದುಡಿಯುವ ಕೈಗಳ ಹಿತರಕ್ಷಕ ಕಾರ್ಮಿಕ ಸಚಿವರಾಗಿ, ಶೋಷಿತ ವರ್ಗಗಳ ಜನರ ದನಿಯಾಗಿ, ಹೀಗೆ ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಸದೃಢ, ಸ್ವಾವಲಂಬಿ ಭಾರತ ನಿರ್ಮಾಣದವರೆಗೆ ಬಾಬೂ ಜಗಜೀವನ್ ರಾಮ್ ಅವರ ಕೊಡುಗೆ ಅನನ್ಯ. ದೇಶಕ್ಕಾಗಿ ಬದುಕು ಸವೆಸಿದ ಮಹಾನ್ ಚೇತನ ಬಾಬೂಜಿಯವರ ಪುಣ್ಯಸ್ಮರಣೆ ದಿನ ಅವರನ್ನು ಗೌರವದಿಂದ ಸ್ಮರಿಸಿ ನಮಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.