ಬೆಂಗಳೂರು: ಹೈಕೋರ್ಟ್ ನ್ಯಾಯಮೂರ್ತಿಯಾಗಿ ಎಂ. ನಾಗಪ್ರಸನ್ನ ಇದುವರೆಗೆ 16 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ವಿಲೇವಾರಿ ಮಾಡಿದ ದಾಖಲೆ ಬರೆದಿದ್ದಾರೆ.
ನ್ಯಾಯಮೂರ್ತಿ ನಾಗಪ್ರಸನ್ನ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಮಂಗಳವಾರಕ್ಕೆ 5 ವರ್ಷ ಪೂರ್ಣಗೊಳ್ಳಲಿದೆ. ಬೆಂಗಳೂರು, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರು ವಿಚಾರಣೆ ನಡೆಸಿದ ಪ್ರಕರಣಗಳಲ್ಲಿ ಇದುವರೆಗೆ ವಿಭಾಗೀಯ ಪೀಠದಲ್ಲಿ ಭಾಗಿಯಾಗಿ ವಿಲೇವಾರಿ ಮಾಡಿದ ಪ್ರಕರಣಗಳನ್ನು ಹೊರತುಪಡಿಸಿ ಒಟ್ಟು 16,500 ಪ್ರಕರಣಗಳನ್ನು ವಿಲೇವಾರಿ ಮಾಡಿದ್ದಾರೆ.
ಹೈಕೋರ್ಟ್ ನಲ್ಲಿ ಸಾಮಾನ್ಯವಾಗಿ ನ್ಯಾಯಮೂರ್ತಿಗಳು ಸರಾಸರಿ ವರ್ಷಕ್ಕೆ 750 ಪ್ರಕರಣ ವಿಲೇವಾರಿ ಮಾಡುತ್ತಾರೆಂದು ಅಂದಾಜಿಸಲಾಗಿದೆ. ಕ್ಷಿಪ್ರ ವಿಲೇವಾರಿಗೆ ಹೆಸರಾದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ 2019ರ ನವೆಂಬರ್ 26ರಂದು ಹೈಕೋರ್ಟ್ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. 2021ರ ಸೆಪ್ಟೆಂಬರ್ 8ರಂದು ಅವರ ಸೇವೆ ಕಾಯಂಗೊಂಡಿತ್ತು. ಮತ್ತೋರ್ವ ಹಿರಿಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರು ಕೂಡ ಪ್ರಕರಣಗಳ ಶೀಘ್ರ ವಿಲೇವಾರಿಯಲ್ಲಿ ಮುಂಚೂಣಿಯಲ್ಲಿದ್ದಾರೆ.