ಘಾಜಿಯಾಬಾದ್: ಸಮೋಸಾ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಅದರಲ್ಲಿಯೂ ರಸ್ತೆ ಬದಿಗೆ ಹೋಗುವಾಗ ರಸ್ತೆಯ ಬದಿಗಿರುವ ಸ್ಟಾಲ್ಗಳಲ್ಲೋ ಇಲ್ಲವೇ ಅಂಗಡಿಗಳಿಂದ ಸಮೋಸಾ ಸ್ಮೆಲ್ ಬಂದರೆ ಬೇಡ ಎಂದರೂ ಒಂದು ತಿಂದು ಬಿಡೋಣ ಎನ್ನಿಸುತ್ತದೆ.
ಹೀಗೆ ಎಂದುಕೊಳ್ಳುವ ಮುನ್ನ ಗಾಜಿಯಾಬಾದ್ ಸಿಹಿ ಅಂಗಡಿಯ ಈ ವಿಡಿಯೋವನ್ನೊಮ್ಮೆ ನೋಡಿಬಿಡಿ. ಸಮೋಸಾದಲ್ಲಿ ಹಾಕುವ ಸಲುವಾಗಿ ವ್ಯಕ್ತಿಯೊಬ್ಬ ಆಲೂಗಡ್ಡೆ ತೊಳೆಯುವ ವಿಡಿಯೋ ಇದಾಗಿದೆ. ಘಂಟಾನಗರದಲ್ಲಿರುವ ಕುಮಾರ್ ಸ್ವೀಟ್ಸ್‌ನ ವಿಡಿಯೋ ಇದಾಗಿದ್ದು, ಇದನ್ನು ನೋಡಿದರೆ ಬಹುಶಃ ಸಮೋಸಾ ತಿನ್ನುವ ಮುನ್ನ ನೀವೊಮ್ಮೆ ಯೋಚಿಸುವುದು ಖಂಡಿತ.
ವಿಡಿಯೋದಲ್ಲಿ, ನೀಲಿ ಟೀ ಶರ್ಟ್ ಮತ್ತು ಜೀನ್ಸ್ ಧರಿಸಿದ ವ್ಯಕ್ತಿಯೊಬ್ಬರು ದೊಡ್ಡ ಪಾತ್ರೆಯೊಳಗೆ ಕಾಲಿಟ್ಟು ಆಲೂಗಡ್ಡೆಯನ್ನು ತೊಳೆಯುತ್ತಿರುವುದನ್ನು ಕಾಣಬಹುದು. ಈತ ಚಪ್ಪಲಿ ಹಾಕಿಕೊಂಡಿದ್ದಾನೆ! ಆಲೂಗಡ್ಡೆ ತುಂಬಿದ ಪಾತ್ರೆಯಲ್ಲಿ ನಿಂತಿದ್ದಾರೆ ಮತ್ತು ಅವುಗಳನ್ನು ಸ್ವಚ್ಛಗೊಳಿಸುವ ಪ್ರಯತ್ನದಲ್ಲಿ ಪದೇ ಪದೇ ತುಳಿಯುತ್ತಿದ್ದಾನೆ.
ಯುವಕರ ಗುಂಪೊಂದು ಈ ವಿಡಿಯೋವನ್ನು ಚಿತ್ರೀಕರಿಸಿದೆ. ಈ ಹಿಂದೆ ಪಾನೀಪುರಿ ಮಾಡುವುದು, ಕೊಳಚೆ ನೀರಿನಲ್ಲಿ ರಸ್ತೆ ಬದಿ ವ್ಯಾಪಾರಿಗಳು ಸೊಪ್ಪು, ತರಕಾರಿ ತೊಳೆಯುವ ವಿಡಿಯೋಗಳು ಕೂಡ ವೈರಲ್ ಆಗಿವೆ.