ಹೊಂಡ-ಗುಂಡಿಗಳಿಂದ ತುಂಬಿದ ರಸ್ತೆಗಳಲ್ಲಿ ವಾಹನ ಓಡಿಸುವುದು ಅಂದರೆ, ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಆದರೂ ಕೆಲ ಚಾಲಕರು ಬೇರೆ ವಿಧಿ ಇಲ್ಲದೇ ಅದೇ ದಾರಿಯಲ್ಲಿ ವಾಹನಗಳನ್ನ ಓಡಿಸ್ತಿರ್ತಾರೆ. ಯಾವಾಗ ರಸ್ತೆಗಳು ಅಗತ್ಯಕ್ಕಿಂತ ಹೆಚ್ಚಾಗಿ ಕಿತ್ತೊಗಿ ಬಿಟ್ಟಿರುತ್ತೊ, ಆಗ ಅಧಿಕಾರಿಗಳ ಗಮನಕ್ಕೆ ತರುತ್ತಾರೆ.
ರಸ್ತೆಗಳ ಕಥೆ-ವ್ಯಥೆ ಇವುಗಳನ್ನ ಅಧಿಕಾರಿಗಳ ಗಮನಕ್ಕೆ ತಂದರೂ, ಯಾವುದೇ ಪ್ರಯೋಜನೆ ಆಗಿರುವುದಿಲ್ಲ. ಯುಪಿಯ ಚಾಲಕನೊಬ್ಬ ಅಧಿಕಾರಿಗಳ ಈ ನಿರ್ಲಕ್ಷ್ಯ ಧೋರಣೆಯನ್ನ ಖಂಡಿಸಿ ಮೊಬೈಲ್ ಟವರ್ ಹತ್ತಿ ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ.
ರಾಜು ಸೈನಿ ಖತಾರಾ ಅನ್ನೊ ಹೆಸರಿನ ಚಾಲಕ ಲಕ್ನೋ- ಅಲಿಗಢ ಮಾರ್ಗದ ಮೂಲಕ ಪ್ರತಿನಿತ್ಯ ಬಸ್ ಓಡಿಸುತ್ತಿದ್ದ. ಈ ಮಾರ್ಗದ ರಸ್ತೆ ಅಗತ್ಯಕ್ಕೂ ಮೀರಿ ಹೊಂಡ-ಗುಂಡಿಗಳಿಂದ ತುಂಬಿ ಹೋಗಿದ್ದವು.
ಆಗ ಬಸ್ ಓಡಿಸುವಾಗ ಒಂದಿಲ್ಲ ಒಂದು ಸಮಸ್ಯೆ ಎದುರಾಗುತ್ತಿತ್ತು. ಅಷ್ಟೆ ಅಲ್ಲ ಬಸ್ ಕೆಟ್ಟು ಹೋಗುವ ಸಾಧ್ಯತೆಗಳು ಸಹ ಹೆಚ್ಚಾಗಿ ಹೋಗಿತ್ತು. ಆದ್ದರಿಂದ ರಸ್ತೆಯನ್ನ ರಿಪೇರಿ ಮಾಡಿಸಲು ಅಧಿಕಾರಿಗಳಿಗೆ ಮನವಿ ಕೂಡ ಮಾಡಿಕೊಳ್ಳಲಾಗಿತ್ತು.
ಅಧಿಕಾರಿಗಳು ಬಸ್ ಚಾಲಕ ಕೊಟ್ಟ ಮನವಿಯನ್ನ ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಇದರಿಂದ ನೊಂದ ರಾಜು ಮೊಬೈಲ್ ಟವರ್ ಏರಿ ವಂದೇ ಮಾತರಂ ಘೋಷಣೆ ಕೂಗಿ,ಅಲ್ಲಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ತಕ್ಷಣವೇ ಸ್ಥಳಕ್ಕೆ ಧಾವಿಸಿ ಬಂದ ಪೊಲೀಸರು ಹಾಗೂ ಆಡಳಿತ ಅಧಿಕಾರಿಗಳು, ರಾಜು ಅವರ ಮನವೋಲಿಸಿ ಕೆಳಗೆ ಇಳಿಸಿದ್ದಾರೆ.
ಬೆಳಿಗ್ಗೆ 8ಗಂಟೆಯಿಂದ ಶುರುವಾದ ಈ ಹೈಡ್ರಾಮಾ ಸುಮಾರು 3ಗಂಟೆಗಳ ಕಾಲ ಮುಂದುವರೆಯಿತು. ಕೊನೆಗೆ ಯುಪಿ ಸಾರಿಗೆ ಪ್ರಾದೇಶಿಕ ವ್ಯವಸ್ಥಾಪಕರಾದ ಮನೋಜ್ ಕುಮಾರ್, ರಸ್ತೆ ರಿಪೇರಿ ಮಾಡುವ ವ್ಯವಸ್ಥೆ ಮಾಡುವುದಾಗಿ ಹೇಳಿದಾಗಲೇ ಚಾಲಕ ರಾಜು ಕೆಳಗೆ ಇಳಿದು ಬಂದಿದ್ದಾನೆ.