
ಕೊರೊನಾ ಮಾರಿಯಿಂದ ಜಗತ್ತು ಸುಧಾರಿಸಿಕೊಂಡ ಬೆನ್ನಲ್ಲೇ ಇದೀಗ ತಜ್ಞರು ಹೊಸ ಸಾಂಕ್ರಾಮಿಕದ ಆತಂಕವನ್ನು ಹೊರಹಾಕಿದ್ದಾರೆ. ಮಾತ್ರವಲ್ಲದೇ ಡಿಸೀಸ್ ಎಕ್ಸ್ ಎಂಬ ಈ ಹೊಸ ವೈರಸ್ ಕೊರೊನಾಗಿಂತಲೂ 20 ಪಟ್ಟು ಹೆಚ್ಚು ಮಾರಣಾಂತಿಕ ಎಂದು ಹೇಳಿದ್ದಾರೆ.
ಇದು ಕೋವಿಡ್ 19ನಂತೆಯೇ ಮತ್ತೊಂದು ಸಾಂಕ್ರಾಮಿಕ ಕಾಯಿಲೆಯಾಗಿದೆ. ಇದು ಲಕ್ಷಾಂತರ ಜನರ ಸಾವಿಗೆ ಕಾರಣವಾಗಬಹುದು ಎಂದು ಬ್ರಿಟನ್ನ ಆರೋಗ್ಯ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಇದು ಸ್ಪ್ಯಾನಿಷ್ ಜ್ವರದಂತೆಯೆ ವಿನಾಶಕಾರಿಯಾಗಿದೆ ಎಂದು ಡಿಸೀಸ್ ಎಕ್ಸ್ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಡಿಸೀಸ್ ಎಕ್ಸ್ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ಅಂಶಗಳಿವು
ವಿಶ್ವ ಆರೋಗ್ಯ ಸಂಸ್ಥೆಯ ವೆಬ್ಸೈಟ್ನಲ್ಲಿರುವ ಮಾಹಿತಿಯ ಪ್ರಕಾರ, ಡಿಸೀಸ್ ಎಕ್ಸ್ ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಸಾಂಕ್ರಾಮಿಕ ರೋಗಕ್ಕೆ ಕಾರಣವಾಗಬಹುದು. ಇದು ಹೊಸ ಏಜೆಂಟ್ ವೈರಸ್, ಬ್ಯಾಕ್ಟೀರಿಯಾ ಅಥವಾ ಫಂಗಸ್ ಆಗಿರಬಹುದು. ಇದು ಆರ್ಎನ್ಎ ವೈರಸ್ಗೆ ಸಂಬಂಧಿಸಿದ ಝೂನೋಟಿಕ್ ಕಾಯಿಲೆಗೆ ಸಂಬಧಿಸಿದೆ.
ಕಾಮಾಲೆ ರೋಗದ ಮೂಲಕ ಮೊಟ್ಟ ಮೊದಲ ಝೂನೋಟಿಕ್ ವೈರಸ್ನ್ನು 1901ರಲ್ಲಿ ಗುರುತಿಸಲಾಗಿತ್ತು. ಹೆಚ್ಚುತ್ತಿರುವ ವೈರಸ್ಗಳ ಸಂಖ್ಯೆಯು ಪರಿಸರ ನಾಶ ಹಾಗೂ ವನ್ಯಜೀವಿಗಳ ಮಾರಾಟದ ಪರಿಣಾಮವಾಗಿದೆ ಎಂಬುದು ತಜ್ಞರ ಅನಿಸಿಕೆಯಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಆರ್ & ಡಿ ಸೈಂಟಿಫಿಕ್ ಅಡ್ವೈಸರಿ ಗ್ರೂಪ್ ಎಂದು ಕರೆಯಲ್ಪಡುವ ವಿಜ್ಞಾನಿಗಳ ಗುಂಪು ಈ ವೈರಸ್ ಬಗ್ಗೆ ಅಧ್ಯಯನ ಮಾಡುತ್ತಿದೆ. ಈ ವೈರಸ್ನ್ನು 2018ರ ಫೆಬ್ರವರಿಯಲ್ಲಿಯೇ ಪತ್ತೆ ಮಾಡಲಾಗಿದೆ. ಇದು ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗವನ್ನು ಉಂಟು ಮಾಡುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ .