ಕರ್ನಾಟಕದಲ್ಲಿ ಸುಮಾರು 2,000 ಜನರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಔಷಧಿಗಳನ್ನು ತಿರಸ್ಕರಿಸುವುದು ಸಾಮಾನ್ಯ ಸಮಸ್ಯೆಯಾಗಿದೆ ಎಂದು ತಿಳಿದುಬಂದಿದೆ. ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿರುವ 80% ಜನರು ಕಳೆದ ಮೂರು ವರ್ಷಗಳಲ್ಲಿ ತಾವು ಖರೀದಿಸಿದ ಬಳಕೆಯಾಗದ ಔಷಧಿಗಳನ್ನು ತ್ಯಜಿಸಿದ್ದೇವೆ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಸಮುದಾಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಲೋಕಲ್ ಸರ್ಕಲ್ಸ್ ಸಮೀಕ್ಷೆಯನ್ನು ನಡೆಸಿದೆ. ಒಂದೆರಡು ಸ್ಟ್ರಿಪ್ ಮಾತ್ರೆಯನ್ನು ಪಡೆಯಲು ರೋಗಿಗಳು ಬಯಸಿದರೆ ಅದನ್ನು ಕಟ್ ಮಾಡಬೇಕಾಗುತ್ತದೆ ಎನ್ನುವ ಉದ್ದೇಶದಿಂದ ಅಂಗಡಿಯವರು ಹಲವರು ಸ್ಟ್ರಿಪ್ಸ್ ನೀಡುತ್ತಾರೆ. ಒತ್ತಾಯಪೂರ್ವಕವಾಗಿ ರೋಗಿಗಳು ಎಲ್ಲವನ್ನೂ ಖರೀದಿಸಬೇಕಾಗುತ್ತದೆ. ಆದ್ದರಿಂದ ಉಳಿದ ಮಾತ್ರೆಗಳನ್ನು ಎಸೆಯುತ್ತೇವೆ ಎಂದು ಹೇಳಿದ್ದಾರೆ ಶೇಕಡಾ 48ರಷ್ಟು ಮಂದಿ.
ಇನ್ನು ಕೆಲವರು ಮಾತ್ರೆಗಳನ್ನು ಪಡೆದ ಬಳಿಕ ಅದರಿಂದ ಆಗುವ ಸೈಡ್ ಇಫೆಕ್ಟ್ಗಳ ಬಗ್ಗೆ ಅರಿತು ಎಸೆಯುತ್ತಿದ್ದಾರೆ. ಹೆಚ್ಚುವರಿ ಮಾತ್ರೆಗಳನ್ನು ಅಂಗಡಿಯವರು ವಾಪಸ್ ಪಡೆಯುವಂಥ ಪ್ರಕ್ರಿಯೆ ಇದ್ದರೆ ಚೆನ್ನ ಎಂದು ರೋಗಿಗಳು ವಿವರಿಸುತ್ತಾರೆ. ಆದರೆ ವಾಪಸ್ ಪಡೆಯಲು ಅಂಗಡಿಯವರು ನಿರಾಕರಿಸುವ ಕಾರಣ ಹೆಚ್ಚುವರಿ ಮಾತ್ರೆಗಳನ್ನು ಎಸೆಯದೇ ಬೇರೆ ದಾರಿ ಇಲ್ಲ ಎನ್ನುವುದು ಅವರ ಮಾತು.