ಬೆಂಗಳೂರು : ಸೆ.26 ರ ಮಂಗಳವಾರ ‘ಬೆಂಗಳೂರು ಬಂದ್’ ಗೆ ರಾಜ್ಯ ರೈತ ಸಂಘಗಳ ಒಕ್ಕೂಟ ಈಗಾಗಲೇ ಕರೆ ನೀಡಿದೆ. ಆದರೆ ಕೆಲವು ಸಂಘಟನೆಗಳು ತಟಸ್ಥ ಧೋರಣೆ ತಾಳಿದ್ದು, ಬೆಂಗಳೂರು ಬಂದ್ ಅನುಮಾನ ಎಂದು ಹೇಳಲಾಗುತ್ತಿದೆ.
ಹೌದು. ರಾಜ್ಯ ರೈತ ಸಂಘಗಳ ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಜಲ ಸಂರಕ್ಷಣಾ ಸಮಿತಿಯಿಂದ ಮಂಗಳವಾರ ಬಂದ್ಗೆ ಕರೆ ನೀಡಲಾಗಿದ್ದು, ಕನ್ನಡ ಪರ ಸಂಘಟನೆಗಳು ಈ ವಿಚಾರವಾಗಿ ತಟಸ್ಥ ಧೋರಣೆ ತಾಳಿವೆ.
ಮಂಗಳವಾರ ಬಂದ್’ ಗೆ ನಮ್ಮ ಬೆಂಬಲವಿಲ್ಲ ಎಂದು ಪ್ರವೀಣ್ ಶೆಟ್ಟಿ ಬಣ ಹೇಳಿದೆ. ಮಂಗಳವಾರ ಕರೆ ನೀಡಿದ್ದು ಬಹಳ ಬೇಗ ಆಯ್ತು, ಬೇರೆ ದಿನಾಂಕದಂದು ಬಂದ್ ಘೋಷಣೆ ಮಾಡಬೇಕಿತ್ತು. ಮಂಗಳವಾರ ಬಹಳ ಬೇಗ ಆಯಿತು. ಎಲ್ಲರನ್ನೂ ಅಷ್ಟು ಬೇಗ ಒಟ್ಟುಗೂಡಿಸಲು ಆಗುವುದಿಲ್ಲ ಎಂದು ಹೇಳಿದ್ದಾರೆ.
ಈ ಹಿನ್ನೆಲೆ ಇಂದು ವಿವಿಧ ಸಂಘಟನೆಗಳು ಒಟ್ಟಾಗಿ ಮತ್ತೊಂದು ಸುತ್ತಿನ ಸಭೆ ನಡೆಸಲಿದ್ದು, ಬೆಂಗಳೂರು ಬಂದ್ ದಿನಾಂಕ ಬದಲಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಇನ್ನೊಂದೆಡೆ ವಾಟಾಳ್ ನಾಗರಾಜ್ ಕರ್ನಾಟಕ ಬಂದ್ ಗೆ ಸೋಮವಾರ ದಿನಾಂಕ ಘೋಷಣೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಸುಪ್ರೀಂಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿರುವ ಬೆನ್ನಲ್ಲೇ ರಾಜ್ಯದಲ್ಲಿ ಪ್ರತಿಭಟನೆ ಭುಗಿಲೆದ್ದಿದೆ.