ಎಷ್ಟೋ ಜನರು ಬಾಯಿಯ ದುರ್ವಾಸನೆಯಿಂದ ಬಳಲ್ತಾರೆ. ಬಾಯಿಯ ದುರ್ಗಂಧಕ್ಕೂ ಹೃದಯದ ಕಾಯಿಲೆಗಳಿಗೂ ಸಂಬಂಧ ಇದೆ ಅನ್ನೋದು ನಿಮಗೆ ಗೊತ್ತಿದೇಯೇ? ನಿಮ್ಮ ಬಾಯಿಯನ್ನು ಸರಿಯಾಗಿ ಶುಚಿಗೊಳಿಸದಿದ್ದರೆ, ನೀವು ಅನೇಕ ರೋಗಗಳಿಗೆ ಆಹ್ವಾನ ಕೊಟ್ಟಂತೆ. ಇದರಲ್ಲಿ ಹೃದ್ರೋಗವೂ ಸೇರಿದೆ.
ಬಾಯಿಯ ಆರೋಗ್ಯದ ಮೇಲೆ ಪರಿಣಾಮ ಬೀರುವ ಕೆಲವು ಸಾಮಾನ್ಯ ಕಾಯಿಲೆಗಳೆಂದರೆ ಕುಹರ (ಹಲ್ಲು ಕೊಳೆಯುವುದು), ಪರಿದಂತದ ಕಾಯಿಲೆ ಮತ್ತು ಬಾಯಿಯ ಕ್ಯಾನ್ಸರ್. ವರದಿಗಳ ಪ್ರಕಾರ, ಬಾಯಿಯನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ.
ಬಾಯಿಯಲ್ಲಿ ಲಕ್ಷಾಂತರ ಬ್ಯಾಕ್ಟೀರಿಯಾಗಳಿರುತ್ತವೆ. ಸರಿಯಾಗಿ ಹಲ್ಲುಜ್ಜಿ, ನಾಲಗೆಯನ್ನು ಶುಚಿಗೊಳಿಸದೇ ಇದ್ದರೆ ಇವುಗಳಿಂದ್ಲೇ ಅಪಾಯವಾಗುತ್ತದೆ. ಬಾಯಿ ಸ್ವಚ್ಛಗೊಳಿಸಲು ಸೋಮಾರಿತನ ಮಾಡಿದ್ರೆ ಈ ಬ್ಯಾಕ್ಟೀರಿಯಾಗಳು ರಕ್ತನಾಳಗಳ ಮೂಲಕ ಹೃದಯಕ್ಕೆ ತಲುಪುತ್ತವೆ. ಹಾಗಾಗಿ ನಿಮ್ಮ ಹಲ್ಲುಜ್ಜುವ ವಿಧಾನವನ್ನು ಬದಲಾಯಿಸಿಕೊಳ್ಳಿ.
ನಿಮ್ಮ ಹಲ್ಲುಜ್ಜುವ ಬ್ರಷ್ ಅನ್ನು ಒಸಡುಗಳಿಂದ 45 ಡಿಗ್ರಿ ಕೋನದಲ್ಲಿ ಇರಿಸಿ. ನಂತರ ನಿಧಾನವಾಗಿ ಬ್ರಷ್ ಅನ್ನು ಹಿಂದಕ್ಕೆ ಮತ್ತು ಮುಂದಕ್ಕೆ ಸರಿಸಿ. ಹಲ್ಲುಗಳ ಹೊರ ಮೇಲ್ಮೈ, ಒಳ ಮೇಲ್ಮೈ ಅನ್ನು ಸರಿಯಾಗಿ ಉಜ್ಜಿ. ಮುಂಭಾಗದ ಹಲ್ಲುಗಳನ್ನು ಸ್ವಚ್ಛಗೊಳಿಸಲು ಬ್ರಷ್ ಅನ್ನು ಉದ್ದವಾಗಿ ಓರೆಯಾಗಿಸಿ, ಸ್ಟ್ರೋಕ್ ರೀತಿಯಲ್ಲಿ ಮಾಡಿ. ಸರಿಯಾಗಿ ಬ್ರಷ್ ಮಾಡುವ ಮೂಲಕ ಹಲವು ಖಾಯಿಲೆಗಳನ್ನು ನೀವು ತಡೆಗಟ್ಟಬಹುದು.