ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. 5-6 ದಿನಗಳ ಹಿಂದೆಯೇ ಬೆಂಗಳೂರಿನ ಮಾದನಾಯಕನಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ವಿಷಯ ಇಂದು ಬೆಳಕಿಗೆ ಬಂದಿದೆ.
ಆರ್ಥಿಕ ಸಂಕಷ್ಟ, ಸಮಸ್ಯೆಗಳ ಸುಳಿಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗುರುಪ್ರಸಾದ್ ಸಿನಿಮಾಗಾಗಿ 3 ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಪದೇ ಪದೇ ಮನೆ ಬದಲಾಯಿಸುತ್ತಿದ್ದರು. ಅಲ್ಲದೇ ದುಶ್ಚಟಕ್ಕೆ ಸಿಲುಕಿದ್ದ ಅವರು, ವಿಪರೀತ ಕುಡಿತದ ಚಟ ಹೊಂದಿದ್ದರು. ಅಲ್ಲದೇ ವೈಯಕ್ತಿಕ ಬದುಕಿನಲ್ಲಿಯೂ ಸಾಕಷ್ಟು ಸಮಸ್ಯೆಗಳನ್ನು ಹೊಂದಿದ್ದರು.
2016ರಲ್ಲಿ ಶ್ರೀನಿವಾಸ್ ಎಂಬುವವರಿಂದ 30 ಲಕ್ಷ ರೂಪಾಯಿ ಸಾಲ ಪಡೆದಿದ್ದ ಗುರುಪ್ರಸಾದ್ ಹಿಂದಿರುಗಿಸಿರಲಿಲ್ಲ. 2018ರಲ್ಲಿ ಬ್ಯಾಂಕ್ ನಿಂದ 40 ಲಕ್ಷ ಸಾಲ ಪಡೆದಿದ್ದರು. ಕ್ರೌಡ್ ಫಂಡಿಂಗ್ ಶೇರ್ ನಲ್ಲಿಯೂ 1 ಕೋಟಿ 16 ಲಕ್ಷ ಸಾಲ ಮಾಡಿದ್ದರು. ಸಿನಿಮಾಗಾಗಿ ಒಟ್ಟು 3 ಕೋಟಿ ಸಾಲ ಮಾಡಿದ್ದರು ಎಂದು ತಿಳಿದುಬಂದಿದೆ.
ಇನ್ನೊಂದೆಡೆ ಗುರುಪ್ರಸಾದ್ ನೀಡಿದ್ದ ಹಲವು ಚೆಕ್ ಬೌನ್ಸ್ ಆಗಿತ್ತು. ಇದರಿಂದ ಶ್ರೀನಿವಾಸ್ ಎಂಬುವವರು ಗುರುಪ್ರಸಾದ್ ವಿರುದ್ಧ ಚೆಕ್ ಬೌನ್ಸ್ ಕೇಸ್ ದಾಖಲಿಸಿದ್ದರು. ಚೆಕ್ ಬೌನ್ಸ್ ಕೇಸ್ ನಲ್ಲಿ ಗುರು ಪ್ರಸಾದ್ ಬಂಧನ ಭೀತಿಯಲ್ಲಿದ್ದರು. ನ.19ಕ್ಕೆ ವಿಚಾರಣೆ ಕೂಡ ಇತ್ತು ಎಂದು ತಿಳಿದುಬಂದಿದೆ. ಬಂಧನ ಭೀತಿಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಶಂಕೆ ಕೂಡ ಇದೆ ಎನ್ನಲಾಗಿದೆ.