ತ್ರಿವರ್ಣ ಧ್ವಜಕ್ಕೆ ಅವಮಾನ ಮಾಡಿದ ಆರೋಪದಡಿ ಮುಂಬೈ ಮೂಲದ ಚಿತ್ರ ನಿರ್ದೇಶಕ ಅವಿನಾಶ್ ದಾಸ್ ವಿರುದ್ಧ ಅಹ್ಮದಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಾಸ್ ಅವರು ತ್ರಿವರ್ಣ ಧ್ವಜದೊಂದಿಗೆ ಮಹಿಳೆಯೊಬ್ಬರ ಅಶ್ಲೀಲ ಚಿತ್ರವನ್ನು ಹಂಚಿಕೊಂಡಿದ್ದಾರೆ ಎಂದು ಅಹ್ಮದಾಬಾದ್ ಪೊಲೀಸರು ಆರೋಪಿಸಿದ್ದಾರೆ.
ದಾಸ್ ಅವರು ಮೇ 8 ರಂದು ಜಾರ್ಖಂಡ್ ನ ಐಎಎಸ್ ಅಧಿಕಾರಿಣಿ ಪೂಜಾ ಸಿಂಘಾಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇರುವ ಐದು ವರ್ಷಗಳ ಹಿಂದಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಜನರ ಮನಸ್ಸಿನಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ದುರುದ್ದೇಶದಿಂದ ದಾಸ್ ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ ಹಾಗೂ ದೇಶದ ಒಂದು ಉನ್ನತ ಹುದ್ದೆಯಲ್ಲಿರುವ ಅಮಿತ್ ಶಾ ಅವರ ವರ್ಚಸ್ಸಿಗೆ ಮಸಿ ಬಳಿಯುವ ಪ್ರಯತ್ನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಖಂಡ್ ನ ಐಎಎಸ್ ಅಧಿಕಾರಿಣಿ ಪೂಜಾ ಸಿಂಘಾಲ್ ಅವರನ್ನು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ. ಇದಾದ ಬಳಿಕ ದಾಸ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೂಜಾ ಅವರು ಅಮಿತ್ ಶಾ ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದು, ಅಧಿಕಾರಿಯನ್ನು ಬಂಧಿಸುವ ಮುನ್ನ ತೆಗೆದ ಚಿತ್ರ ಎಂಬ ತಲೆ ಬರಹ ಕೊಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ದಾಸ್ ಅವರು ಅಮಿತ್ ಶಾ ಅವರ ಚಾರಿತ್ರ್ಯಹರಣ ಮಾಡುವ ಉದ್ದೇಶದಿಂದ ಈ ಫೋಟೋ ಹಂಚಿಕೊಂಡಿದ್ದಾರೆ ಮತ್ತು ತಮ್ಮ ಫೇಸ್ ಬುಕ್ ನಲ್ಲಿ ಮಹಿಳೆಯೊಬ್ಬಳು ತ್ರಿವರ್ಣ ಧ್ವಜವನ್ನು ಧರಿಸಿರುವ ಚಿತ್ರವನ್ನು ಹಂಚಿಕೊಂಡಿರುವುದು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದಂತಾಗಿದೆ ಎಂದು ಪೊಲೀಸರು ದೂರು ದಾಖಲಿಸಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.