ಬೆಂಗಳೂರು: ರಾಜ್ಯದಲ್ಲಿ 9 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳನ್ನು 2023 -24ನೇ ಸಾಲಿನಿಂದ ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಅನುಮತಿ ಕೋರಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ ಗೆ ಪತ್ರ ಬರೆಯಲಾಗಿದೆ.
ಪ್ರತಿ ಕಾಲೇಜಿನಲ್ಲಿ ನಾಲ್ಕು ಕೋರ್ಸ್ ಗಳು, ಪ್ರತಿ ಕೋರ್ಸ್ ಗೆ 60 ಸೀಟುಗಳಂತೆ 9 ಕಾಲೇಜುಗಳಿಂದ 2160 ಸೀಟುಗಳಿಗೆ ಅನುಮತಿ ಕೇಳಲಾಗಿದೆ. ಇದರಿಂದ ರಾಜ್ಯದ ಬಡ ವಿದ್ಯಾರ್ಥಿಗಳು ಅತಿ ಕಡಿಮೆ ಶುಲ್ಕದಲ್ಲಿ ಡಿಪ್ಲೋಮಾ ಕೋರ್ಸ್ ಗೆ ಪ್ರವೇಶ ಪಡೆಯಬಹುದಾಗಿದೆ.
2023 -24 ನೇ ಸಾಲಿನಲ್ಲಿ ಡಿಪ್ಲೋಮೋ ಕೋರ್ಸ್ ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ 2,164 ಹೆಚ್ಚುವರಿ ಸೀಟು ಮತ್ತು ಪ್ರಚಲಿತ ಕೋರ್ಸುಗಳ ಆಯ್ಕೆ ಸಿಗುವ ಸಾಧ್ಯತೆ ಹೆಚ್ಚಾಗಿದೆ.
ದೇವದುರ್ಗದ ಅರಕೇರ, ಮೈಸೂರಿನ ಪಿರಿಯಾಪಟ್ಟಣ, ಹಾವೇರಿಯ ಬ್ಯಾಡಗಿ, ಧಾರವಾಡದ ಕಮಡೋಹಳ್ಳಿ, ಗದಗದ ಹೊಳೆಆಲೂರು, ರಾಯಚೂರಿನ ಮಸ್ಕಿ, ತುಮಕೂರು ತಿಪಟೂರು, ಬೆಳಗಾವಿಯ ರಾಮದುರ್ಗ, ವಿಜಯಪುರದ ಕೊಲ್ಹಾರದಲ್ಲಿ ಡಿಪ್ಲೊಮಾ ಕಾಲೇಜುಗಳನ್ನು ಆರಂಭಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅನುಮತಿಗಾಗಿ ಪತ್ರ ಬರೆಯಲಾಗಿದೆ.
ರಾಜ್ಯದಲ್ಲಿ 102 ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಿದ್ದು, 9 ಕಾಲೇಜುಗಳು ಹೊಸದಾಗಿ ಸೇರ್ಪಡೆಯಾಗಲಿವೆ. 22,928 ಸೀಟುಗಳ ಜೊತೆಗೆ ಈ ಶೈಕ್ಷಣಿಕ ಸಾಲಿನಿಂದ ಹೊಸದಾಗಿ 2160 ಸೀಟುಗಳಿಗೆ ಅನುಮತಿ ಸಿಗುವ ಸಾಧ್ಯತೆ ಇದೆ. ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ಕ್ಲೌಡ್ ಕಂಪ್ಯೂಟಿಂಗ್, ಮೆಕಾನಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಕೋರ್ಸ್ ಗಳನ್ನು ಆರಂಭಿಸಲಾಗುವುದು ಎಂದು ಹೇಳಲಾಗಿದೆ.