ಬೆಂಗಳೂರು: ನಾಳೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕರೆದಿದ್ದ ಡಿನ್ನರ್ ಮೀಟಿಂಗ್ ರದ್ದುಪಡಿಸಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಸೂಚನೆ ಮೇರೆಗೆ ಡಿನ್ನರ್ ಮೀಟಿಂಗ್ ರದ್ದು ಮಾಡಲಾಗಿದೆ.
ಸಭೆ ರದ್ದಾಗಿರುವ ಬಗ್ಗೆ ಗೃಹ ಸಚಿವ ಡಾ. ಪರಮೇಶ್ವರ್ ಮಾಧ್ಯಮ ಪ್ರಕಟಣೆ ನೀಡಿದ್ದಾರೆ. ಮುಂದಿನ ಸಭೆಯ ದಿನಾಂಕವನ್ನು ಶೀಘ್ರವೇ ತಿಳಿಸುವುದಾಗಿ ಮಾಹಿತಿ ನೀಡಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಂತೆ ಬೆಗಳೂರಿನ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಪಾರ್ಟಿ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಿದ್ದರು.
ಈ ಡಿನ್ನರ್ ಮೀಟಿಂಗ್ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಗೃಹ ಸಚಿವ ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಮೀಟಿಂಗ್ ಏರ್ಪಾಟು ಮಾಡಲಾಗಿತ್ತು.
ಎಸ್.ಸಿ., ಎಸ್.ಟಿ ಸಮಾವೇಶಕ್ಕೆ ಪೂರ್ವಬಾವಿ ಸಿದ್ಧತೆಗೆ ಚರ್ಚೆಗಾಗಿ ಒಂದೆಡೆ ಸೇರುವ ನಿಟ್ಟಿನಲ್ಲಿ ಸಭೆ ನಡೆಸುತ್ತಿದ್ದು, ಈ ವೇಳೆ ಊಟಕ್ಕೆ ಏರ್ಪಾಟು ಮಾಡಲಾಗಿದೆ ಎಂದು ಪರಮೇಶ್ವರ್ ತಿಳಿಸಿದ್ದರು. ಆದರೆ, ಹೈಕಮಾಂಡ್ ಸೂಚನೆ ಹಿನ್ನಲೆಯಲ್ಲಿ ಡಿನ್ನರ್ ಮೀಟಿಂಟ್ ರದ್ದು ಮಾಡಲಾಗಿದೆ.