ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದಂತೆ ಇತ್ತ ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಡಿನ್ನರ್ ಪಾರ್ಟಿ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಿದ್ದರು. ಸತೀಶ್ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್ ಮೀಟಿಂಗ್ ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಇದೀಗ ಗೃಹ ಸಚಿವ ಪರಮೇಶ್ವರ್ ಮನೆಯಲ್ಲಿ ಡಿನ್ನರ್ ಮೀಟಿಂಗ್ ಏರ್ಪಾಟು ಮಾಡಲಾಗಿದೆ.
ಸಚಿವ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಮಾಡಿದ್ದ ಡಿನ್ನರ್ ಪಾರ್ಟಿ ಮೀಟಿಂಗ್ ಕೆ.ಪಿ.ಸಿ.ಸಿ ಅಧ್ಯಕ್ಷರ ಬದಲಾವಣೆ, ಸಿಎಂ ಬದಲಾವಣೆ ಚರ್ಚೆಗೆ ಗ್ರಾಸವಾಗಿತ್ತು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ಇದೀಗ ಗೃಹ ಸಚಿವ ಡಾ.ಪರಮೇಶ್ವರ್ ನಿವಾಸದಲ್ಲಿ ನಾಳೆ ಡಿನ್ನರ್ ಮೀಟಿಂಗ್ ಕರೆಯಲಾಗಿದ್ದು, ಕಾಂಗ್ರೆಸ್ ನಾಯಕರ ನಡೆ ತೀವ್ರ ಕುತೂಹಲ ಮೂಡಿಸಿದೆ.
ಡಿನ್ನರ್ ಪಾರ್ಟಿ ಮೀಟಿಂಗ್ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಪರಮೇಶ್ವರ್, ಎಸ್.ಸಿ, ಎಸ್.ಟಿ ಸಮಾವೇಶ ಮಾಡುತ್ತಿದ್ದೇವೆ. ಹಾಗಾಗಿ ಇದಕ್ಕೆ ಪೂರ್ವಬಾವಿ ಸಭೆ ನಿಟ್ಟಿನಲ್ಲಿ ಡಿನ್ನರ್ ಪಾರ್ಟಿ ನಡೆಸುತ್ತಿದ್ದೇವೆ. ಇದಕ್ಕೆ ಹೊಸ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಸಮಾವೇಶದ ಪೂರ್ವಬಾವಿ ಸಿದ್ಧತೆಗೆ ಚರ್ಚೆಗಾಗಿ ಒಂದೆಡೆ ಸೇರುವ ನಿಟ್ಟಿನಲ್ಲಿ ಸಭೆ ನಡೆಸುತ್ತಿದ್ದು, ಈ ವೇಳೆ ಊಟಕ್ಕೆ ಏರ್ಪಾಟು ಮಾಡಲಾಗಿದೆ ಎಂದು ತಿಳಿಸಿದರು.