ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಮುನಿಸಿಕೊಂಡಿರುವ ಶಿರಹಟ್ಟಿ ಭಾವೈಕ್ಯ ಪೀಠದ ಫಕೀರ ದಿಂಗಾಲೇಶ್ವರ ಸ್ವಾಮೀಜಿಯವರು, ಧಾರವಾಡ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.
ಭಕ್ತರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಸ್ವಾಮೀಜಿಯವರು ಈ ತೀರ್ಮಾನ ಕೈಗೊಂಡಿದ್ದು, ಪಕ್ಷೇತರರಾಗಿ ದಿಂಗಾಲೇಶ್ವರ ಶ್ರೀಗಳು ಕಣಕ್ಕಿಳಿಯುತ್ತಿರುವುದರಿಂದ ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುವಂತಾಗಿದೆ. ಈ ಕ್ಷೇತ್ರದಲ್ಲಿ ಪ್ರಹ್ಲಾದ್ ಜೋಶಿ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಕಾಂಗ್ರೆಸ್ ನಿಂದ ವಿನೋದ ಅಸೂಟಿ ಸ್ಪರ್ಧಿಸುತ್ತಿದ್ದಾರೆ.
ಪ್ರಹ್ಲಾದ್ ಜೋಶಿ ಸೇಡಿನ ರಾಜಕಾರಣ ನಡೆಸುತ್ತಿದ್ದಾರೆ. ವೀರಶೈವ, ಲಿಂಗಾಯಿತ, ಕುರುಬ ಸೇರಿದಂತೆ ಇತರೆ ಜನಾಂಗದ ಮುಖಂಡರನ್ನು ಹತ್ತಿಕ್ಕುತ್ತಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ತಪ್ಪಲೂ ಸಹ ಪ್ರಹ್ಲಾದ್ ಜೋಶಿ ಕಾರಣ ಎಂದು ಆರೋಪಿಸಿದ್ದ ಸ್ವಾಮೀಜಿಯವರು, ಬಿಜೆಪಿ ಈ ಕ್ಷೇತ್ರದಲ್ಲಿ ಬೇರೆಯವರಿಗೆ ಟಿಕೆಟ್ ಕೊಡುವಂತೆ ಆಗ್ರಹಿಸಿದ್ದರು.
ಆದರೆ ಪ್ರಹ್ಲಾದ್ ಜೋಶಿ ಅವರೇ ಈ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗುವುದು ಖಚಿತವಾದ ಕಾರಣ ಈಗ ಪಕ್ಷೇತರವಾಗಿ ಕಣಕ್ಕಿಳಿಯಲು ದಿಂಗಾಲೇಶ್ವರ ಸ್ವಾಮೀಜಿ ತೀರ್ಮಾನಿಸಿದ್ದಾರೆ. ಈ ಮೊದಲು ಸ್ವಾಮೀಜಿಯವರು ಒಪ್ಪಿದರೆ ಕಾಂಗ್ರೆಸ್ ಟಿಕೆಟ್ ನೀಡಲು ಆ ಪಕ್ಷದ ಮುಖಂಡರು ಚಿಂತನೆ ನಡೆಸಿದ್ದರಾದರೂ ಭಕ್ತರೊಂದಿಗಿನ ಸಮಾಲೋಚನೆ ಬಳಿಕ ಸ್ವಾಮೀಜಿ ಪಕ್ಷೇತರವಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ.