ಹುಬ್ಬಳ್ಳಿ: ಮನೆ ಬಾಗಿಲಿಗೆ ಆರೋಗ್ಯ ಸೇವೆ, ಔಷಧ ಪೂರೈಸಲು ಸರ್ಕಾರ ಮುಂದಾಗಿದೆ. ಗುಣಮಟ್ಟದ ಚಿಕಿತ್ಸೆ, ಆರೋಗ್ಯ ಜಾಗೃತಿ ಜೊತೆಗೆ ಆರಂಭದಲ್ಲಿಯೇ ರೋಗ ಪತ್ತೆ ಹಚ್ಚುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸುತ್ತಿದ್ದು, ಪ್ರಾಯೋಗಿಕವಾಗಿ 8 ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಲು ಚಿಂತನೆ ನಡೆದಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹುಬ್ಬಳ್ಳಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಯೋಜನೆಯಡಿ ಬೆಳಗಾವಿ, ಗದಗ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಆರೋಗ್ಯ ಸಿಬ್ಬಂದಿ ಪ್ರತಿ ಮನೆಗೂ ತೆರಳಿ ಪ್ರಾಥಮಿಕ ಸ್ಕ್ರೀನಿಂಗ್ ನಡೆಸಲಿದ್ದಾರೆ. ಮಧುಮೇಹ, ಕ್ಯಾನ್ಸರ್ ಸೇರಿದಂತೆ ವಿವಿಧ ಬಗೆಯ ರೋಗಗಳ ಸ್ಕ್ರೀನಿಂಗ್ ನಡೆಸಿ ಅವರಿಗೆ ಉತ್ತಮ ಚಿಕಿತ್ಸೆ ಕೊಡಿಸುವ ಉದ್ದೇಶವಿದ್ದು, ಇದರೊಂದಿಗೆ ಅಧಿಕ ರಕ್ತದೊತ್ತಡ, ಮಧುಮೇಹ ರೋಗಿಗಳಿಗೆ ಪ್ರತಿ ತಿಂಗಳು ಮನೆಗೆ ಔಷಧ ತಲುಪಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.