ಹುಬ್ಬಳ್ಳಿ: ಎರಡು ಮೂರು ತಿಂಗಳಲ್ಲಿ ಗೃಹ ಆರೋಗ್ಯ ಯೋಜನೆ ಜಾರಿಗೆ ಸರ್ಕಾರ ಉದ್ದೇಶಿಸಿದೆ. ಇದಿನ್ನೂ ಚರ್ಚೆಯ ಹಂತದಲ್ಲಿದ್ದು, ಶೀಘ್ರವೇ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡುವ ಉದ್ದೇಶದಿಂದ ಗೃಹ ಆರೋಗ್ಯ ಯೋಜನೆ ಜಾರಿಗೆ ತರಲಾಗುವುದು. ಹೃದಯಾಘಾತ, ಕಿಡ್ನಿ ವೈಫಲ್ಯ, ಕ್ಯಾನ್ಸರ್, ಪಾರ್ಶ್ವವಾಯು ಮೊದಲಾದ ಅಸಾಂಕ್ರಾಮಿಕ ರೋಗಗಳಿಂದ ಹೆಚ್ಚಿನ ಸಾವು ಸಂಭವಿಸುತ್ತಿವೆ. ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಪ್ರಾಣಾಪಾಯದಿಂದ ಪಾರಾಗಬಹುದಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಮನೆಗೆ ತೆರಳಿ ಜನರ ಆರೋಗ್ಯ ತಪಾಸಣೆ ಮಾಡುವ ಗೃಹ ಆರೋಗ್ಯ ಯೋಜನೆ ಜಾರಿಗೆ ಚಿಂತನೆ ನಡೆದಿದೆ ಎಂದು ತಿಳಿಸಿದ್ದಾರೆ.