ಬೆಂಗಳೂರು: ಮನೆ ಮನೆಗೆ ತೆರಳಿ ಆರೋಗ್ಯ ಪರೀಕ್ಷೆ ನಡೆಸುವ ಮತ್ತು ಕೆಲವು ಕಾಯಿಲೆಗಳಿಗೆ ಔಷಧಿಯನ್ನು ತಲುಪಿಸುವ ಗೃಹ ಆರೋಗ್ಯ ಯೋಜನೆ ಶೀಘ್ರವೇ ಆರಂಭಿಸುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿ -ಕ್ಯಾಂಪ್ ಆಯೋಜಿಸಿದ್ದ ಸಿಎಸ್ಆರ್ ಪಾಲುದಾರಿಕೆ ಕುರಿತ ದುಂಡು ಮೇಜಿನ ಸಭೆಯಲ್ಲಿ ಮಾತನಾಡಿದ ಸಚಿವರು, ರಾಜ್ಯದ ಜನರ ನೇತ್ರ ತಪಾಸಣೆ ನಡೆಸುವ ಆಶಾಕಿರಣ ಯೋಜನೆಯನ್ನು ಡಿಸೆಂಬರ್ ನಲ್ಲಿ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.
ಸಾರ್ವಜನಿಕ ಖಾಸಗಿ ಸಹಭಾಗಿತ್ವದಿಂದ ಆರೋಗ್ಯ ಸೌಲಭ್ಯ ಉತ್ತಮಗೊಳಿಸಲು ಕ್ರಮ ಕೈಗೊಳ್ಳಲಾಗುವುದು. ನೂತನ ತಂತ್ರಜ್ಞಾನ ಬಳಕೆಗೆ ಇದು ಸಹಕಾರಿಯಾಗಲಿದೆ. ಉತ್ತಮ ವೈದ್ಯಕೀಯ ಸೌಲಭ್ಯ ಪ್ರತಿಯೊಬ್ಬರಿಗೂ ದೊರಕಿಸಿಕೊಡಲು ಸಾಧ್ಯವಾಗುತ್ತದೆ. ರಾಜ್ಯದಲ್ಲಿ ಕೈಗೆಟುಕುವ ದರದಲ್ಲಿ ಚಿಕಿತ್ಸೆ. ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಗುಣಮಟ್ಟ ಸುಧಾರಣೆ, ಮೂಲಸೌಕರ್ಯ ವೃದ್ಧಿಗೆ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ನಿಧಿಯ ಲಭ್ಯತೆ ಮತ್ತು ಸದ್ಬಳಕೆ ಮುಖ್ಯ ಎಂದು ಹೇಳಿದ್ದಾರೆ.