ಬೆಂಗಳೂರು: ಗ್ಯಾರಂಟಿ ಯೋಜನೆ ವಾಪಸ್ ಗೆ ಕಾಂಗ್ರೆಸ್ ಪಕ್ಷದ ಕೆಲವು ಶಾಸಕರು ಒತ್ತಾಯಿಸುತ್ತಿರುವುದರ ನಡುವೆ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಯೋಜನೆ ಮುಂದುವರೆಸಬೇಕು. ಯೋಜನೆ ನಿಲ್ಲಿಸುವಂತೆ ಹೇಳಿಕೆ ನೀಡುವವರಿಗೆ ಕಡಿವಾಣ ಹಾಕಬೇಕು ಎಂದು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ವಿಧಾನಸಭೆ ಚುನಾವಣೆಯಲ್ಲಿ ಕೇಂದ್ರದ ಜನ ವಿರೋಧಿ ನೀತಿ ಕಾರಣದಿಂದ ಬೆಲೆ ಏರಿಕೆಯಿಂದ ತತ್ತರಿಸಿದ್ದ ಬಡವರಿಗೆ ನೆರವಾಗಲು ಐದು ಗ್ಯಾರಂಟಿ ಯೋಜನೆ ಘೋಷಿಸಿದ್ದು, ಆ ವಾಗ್ದಾನದ ಮೇಲೆ ಜನ 130 ಸ್ಥಾನ ಗೆಲ್ಲಿಸಿಕೊಟ್ಟು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ತಂದಿದ್ದಾರೆ. ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾದ ಕ್ರಾಂತಿಕಾರಿ ಯೋಜನೆಯಾಗಿವೆ. ಮಾಸಿಕ 2,000 ರೂ. ನೀಡುವ ಗೃಹಲಕ್ಷ್ಮಿ, ಮಹಿಳೆಯರಿಗೆ ಉಚಿತ ಪ್ರಯಾಣದ ಶಕ್ತಿ ಯೋಜನೆ, ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ. ಈ ಯೋಜನೆಗಳಿಂದ ವಿಧಾನಸಭೆ, ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತಗಳಿಕೆ ಗಣನೀಯವಾಗಿ ಹೆಚ್ಚಳವಾಗಿದೆ ಎಂದು ಕಾಂಗ್ರೆಸ್ ಬಗ್ಗೆ ಜನ ಇಟ್ಟಿರುವ ನಂಬಿಕೆ ತೋರಿಸುತ್ತದೆ ಎಂದು ತಿಳಿಸಿದ್ದಾರೆ.
ಬಡವರ ಪರವಾಗಿರುವ ಇಂತಹ ಯೋಜನೆಗಳನ್ನು ರದ್ದು ಮಾಡುವುದರಿಂದ ಮತ್ತು ಅಂತಹ ಹೇಳಿಕೆಗಳಿಂದ ಪಕ್ಷದ ಮೇಲಿನ ವಿಶ್ವಾಸ ಕಡಿಮೆಯಾಗಿ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಇಂತಹ ಹೇಳಿಕೆಗಳಿಗೆ ತಕ್ಷಣ ಕಡಿವಾಣ ಹಾಕಬೇಕು ಎಂದು ಪತ್ರ ಬರೆದು ಒತ್ತಾಯಿಸಿದ್ದಾರೆ.