ಬೆಂಗಳೂರು: ಗ್ರಾಮ ಪಂಚಾಯಿತಿ ಪ್ರಮಾಣಪತ್ರಕ್ಕೆ ಹೊಸ ನಿಯಮ ಜಾರಿಗೆ ತಂದಿದ್ದು, ಆರ್.ಡಿ.ಪಿ.ಆರ್. ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ಡಿಜಿಟಲ್ ಸಹಿ ಇದ್ದರಷ್ಟೇ ಪ್ರಮಾಣ ಪತ್ರಕ್ಕೆ ಮಾನ್ಯತೆ ಇರುತ್ತದೆ ಎಂದು ಹೇಳಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಮೂಲಕ ನಾಗರಿಕರಿಗೆ ಹಲವು ಸೇವೆ ನೀಡಲಾಗುತ್ತದೆ. ಇಂತಹ ಸೇವೆಗಳ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ಅಧಿಕಾರಿಗಳ ಡಿಜಿಟಲ್ ಸಹಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಲಾಗಿದೆ.
ಅಗತ್ಯ ಸೇವೆಗಳಿಗೆ ನಾಗರಿಕರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬೇಕಿದೆ. ಆದರೆ, ಮಧ್ಯವರ್ತಿಗಳು ಅಧಿಕಾರಿಗಳಾದ ಬರವಣಿಗೆಯಲ್ಲಿಯೇ ಕೆಲವೇ ಸಮಯದಲ್ಲಿ ಪ್ರಮಾಣಪತ್ರ ಪಡೆದುಕೊಳ್ಳುತ್ತಿದ್ದಾರೆ. ನಾಗರಿಕರಿಗೆ ಪಾರದರ್ಶಕ ಸೇವೆ ಒದಗಿಸುವ ಉದ್ದೇಶದಿಂದ ಸಕಾಲ ಸೇವೆಯಡಿ ಅರ್ಜಿಗಳನ್ನು ಆನ್ ಲೈನ್ ಮೂಲಕ ಸ್ವೀಕರಿಸಿ ವಿತರಿಸಲು ತಿಳಿಸಲಾಗಿದೆ.
ಅರ್ಜಿ ಸ್ವೀಕೃತಿ, ವಿಲೇವಾರಿ, ಸೇವಾ ಪ್ರಮಾಣ ಪತ್ರಗಳ ವಿತರಣೆಗೆ ಬಾಪೂಜಿ ಸೇವಾ ಕೇಂದ್ರ ತಂತ್ರಾಂಶ ಬಳಕೆ ಕಡ್ಡಾಯವಾಗಿದ್ದು, ಡಿಜಿಟಲ್ ಸಹಿ ಇರಬೇಕಿದೆ. ಡಿಜಿಟಲ್ ಸಹಿ ಇಲ್ಲದ ಪ್ರಮಾಣ ಪತ್ರಗಳಿಗೆ ಮಾನ್ಯತೆ ಇರುವುದಿಲ್ಲವೆಂದು ಹೇಳಲಾಗಿದೆ. ಕುಡಿಯುವ ನೀರಿನ ನಿರ್ವಹಣೆ, ಬೀದಿದೀಪ, ನೈರ್ಮಲ್ಯ ಮೊದಲಾದವುಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಪ್ರಮಾಣ ಪತ್ರಕ್ಕೆ ಹೊಸ ನಿಯಮ ಅನ್ವಯವಾಗಲಿದೆ ಎನ್ನಲಾಗಿದೆ.