
ಬಳ್ಳಾರಿ: ಇಂದಿನ ಡಿಜಿಟಲ್ ಯುಗದಲ್ಲಿ ಯುವ ಸಮುದಾಯ ಸೇರಿದಂತೆ ಸಾರ್ವಜನಿಕರು ಸೈಬರ್ ವಂಚನೆಯಿಂದ ಜಾಗೃತರಾಗಬೇಕು ಎಂದು ಬಳ್ಳಾರಿ ವಲಯ ಪೊಲೀಸ್ ಮಹಾನಿರೀಕ್ಷಕ ಬಿ.ಎಸ್.ಲೋಕೇಶ್ ಕುಮಾರ್ ಅವರು ಕರೆ ನೀಡಿದರು.
ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಸೈಬರ್ ಸುರಕ್ಷತೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ರಸ್ತೆ ಸುರಕ್ಷತೆ, ಡ್ರಗ್ಸ್ ಮುಕ್ತ ಕರ್ನಾಟಕಕ್ಕಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲು ನಗರದ ಅನಂತಪುರ ರಸ್ತೆಯ ನೂತನ ಜಿಲ್ಲಾಡಳಿತ ಭವನದ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ‘ಜನಜಾಗೃತಿ ಓಟ’ಗೆ ಚಾಲನೆ ನೀಡಿ, ಬಳಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳಿಗೆ ವಿದ್ಯಾವಂತರೂ ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರ ವಹಿಸಬೇಕು. ಯಾವುದೇ ಅಪರಿಚಿತ ಕರೆ ಬಂದಲ್ಲಿ ಪ್ರತಿಕ್ರಿಯಿಸಬಾರದು. ಮೋಸಕ್ಕೆ ಬಲಿಯಾಗಿ, ಹಣ ಕಳೆದುಕೊಳ್ಳಬೇಡಿ; ಇದರಿಂದ ಮಾನಸಿಕ ನೆಮ್ಮದಿಯೂ ಹಾಳಾಗುತ್ತದೆ ಎಂದು ತಿಳಿಸಿದರು.
ವಾಹನ ಸವಾರರು ತಪ್ಪದೇ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು. ಯುವ ಸಮುದಾಯ ಮಾದಕ ವಸ್ತುಗಳಿಂದ ದೂರವಿರಬೇಕು ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಮಾತನಾಡಿ, ಯುವ ಸಮೂಹ ಸೇರಿದಂತೆ ಮೊಬೈಲ್ ಬಳಸುವ ಪ್ರತಿಯೊಬ್ಬರೂ ಜಾಗೃತರಾಗಿರಬೇಕು. ಸೈಬರ್ ವಂಚನೆಗೆ ಒಳಗಾಗದಂತೆ ನಿಮ್ಮರಿಗೂ, ನಿಮ್ಮ ಸುತ್ತಮುತ್ತಲಿನವರಿಗೂ ಈ ಕುರಿತ ಜಾಗೃತಿ ನೀಡಬೇಕು ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ವಿ.ಜೆ. ಅವರು ಮಾತನಾಡಿ, ಸೈಬರ್ ಸುರಕ್ಷತೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆ, ರಸ್ತೆ ಸುರಕ್ಷತೆ, ಡ್ರಗ್ಸ್ ಮುಕ್ತ ಕರ್ನಾಟಕಕ್ಕಾಗಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಇದೇ ವೇಳೆ ರಸ್ತೆ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸುತ್ತೇನೆ ಎಂದು ಪ್ರತಿಜ್ಞೆ ಕೈಗೊಳ್ಳುವ ಆನ್ ಲೈನ್ ಆಪ್ ಕ್ಯೂರ್ ಆರ್ ಕೋಡ್ ಅನ್ನು ಬಿಡುಗಡೆಗೊಳಿಸಲಾಯಿತು.
ಜನ ಜಾಗೃತಿ ಓಟವು ನಗರದ ನೂತನ ಜಿಲ್ಲಾಡಳಿತ ಭವನದ ಆವರಣದಿಂದ ಆರಂಭಗೊಂಡು ಗಡಿಗಿ ಚೆನ್ನಪ್ಪ ವೃತ್ತ, ಹಳೇ ತಾಲ್ಲೂಕು ಕಚೇರಿ ರಸ್ತೆ, ಹೆಚ್.ಆರ್.ಗವಿಯಪ್ಪ(ಮೋತಿ ಸರ್ಕಲ್), ವಾಲ್ಮೀಕಿ ಸರ್ಕಲ್, ಕನಕದುರ್ಗಮ್ಮ ದೇವಸ್ಥಾನದಿಂದ ಹಳೇ ಬಸ್ ನಿಲ್ದಾಣ ಮುಖಾಂತರ ಮರಳಿ ನೂತನ ಜಿಲ್ಲಾಡಳಿತ ಭವನದ ಆವರಣದವರೆಗೆ ನಡೆಯಿತು. ಓಟದಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಎಎಸ್ಪಿ ನವೀನ್ ಕುಮಾರ್, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಕುಲಸಚಿವ ಎಸ್.ಎನ್.ರುದ್ರೇಶ್ ಸೇರಿದಂತೆ ಅಧಿಕಾರಿಗಳು, ಕ್ರೀಡಾಪಟುಗಳು, ಸಾರ್ವಜನಿಕರು ಭಾಗವಹಿಸಿದ್ದರು.