ಈಗ ಎಲ್ಲ ರೀತಿಯ ಆಹಾರ ಪ್ಯಾಕೇಜ್ ನಲ್ಲಿ ಸಿಗ್ತಿದೆ. ಹಾಲು, ಮೊಸರಿನಿಂದ ಹಿಡಿದು ಚಿಪ್ಸ್ ಸೇರಿದಂತೆ ಎಲ್ಲ ರೀತಿಯ ಆಹಾರವನ್ನು ನೀವು ಪ್ಯಾಕೇಜ್ ನಲ್ಲಿ ಖರೀದಿ ಮಾಡಬಹುದು. ಪ್ಯಾಕೇಜ್ ಆಹಾರವನ್ನು ಬಳಸೋದು ತುಂಬಾ ಸುಲಭ. ಇದನ್ನು ಎಲ್ಲಿ ಬೇಕಾದ್ರೂ ತೆಗೆದುಕೊಂಡು ಹೋಗಬಹುದು. ಅನೇಕ ದಿನಗಳ ಕಾಲ ನಾವಿದನ್ನು ಆರಾಮವಾಗಿ ಇಡಬಹುದು. ಇದ್ರ ರುಚಿ ಎಲ್ಲರನ್ನೂ ಆಕರ್ಷಿಸುತ್ತದೆ.
ಜ್ಯೂಸ್, ಕುಕೀಸ್, ನಮ್ಕೀನ್ ಮತ್ತು ನೂಡಲ್ಸ್ ಸೇರಿದಂತೆ ಬಹುತೇಕ ಎಲ್ಲ ತಿಂಡಿ ನಿಮಗೆ ಪ್ಯಾಕೇಜ್ ನಲ್ಲಿ ಸಿಗುತ್ತದೆ. ಮಕ್ಕಳು ಬಹಳ ಇಷ್ಟಪಟ್ಟು ತಿನ್ನುವ ತಿಂಡಿಗಳಲ್ಲಿ ಪ್ಯಾಕೇಜ್ ಫುಡ್ ಮೊದಲ ಸ್ಥಾನದಲ್ಲಿದೆ. ಇದೇ ಕಾರಣಕ್ಕೆ ಬಹುತೇಕ ಎಲ್ಲರೂ ಇದನ್ನು ಖರೀದಿ ಮಾಡ್ತಾರೆ. ಪ್ರವಾಸದ ಸಮಯದಲ್ಲಿ ಹೆಚ್ಚು ಉಪಯೋಗಕ್ಕೆ ಬರುವ ಈ ಪ್ಯಾಕೇಜ್ ಆಹಾರದ ಬಳಕೆ ದಿನ ದಿನಕ್ಕೂ ಹೆಚ್ಚಾಗ್ತಿದೆ.
ಎಷ್ಟು ರುಚಿಯೋ ಅಷ್ಟೇ ಅಪಾಯಕಾರಿ ಈ ಪ್ಯಾಕೇಜ್ ಫುಡ್. ಇದ್ರಲ್ಲಿ ಸಂರಕ್ಷಕಗಳು, ಕೃತಕ ಬಣ್ಣಗಳು ಮತ್ತು ಹೆಚ್ಚುವರಿ ಕೊಬ್ಬು ಇರುತ್ತದೆ. ಅಲ್ಲದೆ ಇದ್ರಲ್ಲಿ ಉಪ್ಪು ಹೆಚ್ಚಿನ ಮಟ್ಟದಲ್ಲಿ ಕಂಡುಬರುತ್ತದೆ. ಇದು ಆರೋಗ್ಯಕ್ಕೆ ಗಂಭೀರ ಹಾನಿಯನ್ನುಂಟುಮಾಡುತ್ತದೆ. ಇದ್ರಲ್ಲಿ ಎಮಲ್ಸಿಫೈಯರ್ ಎಂಬ ಪದಾರ್ಥವಿದ್ದು ಇದು ಹೃದಯದ ಆರೋಗ್ಯ ಹಾಳು ಮಾಡುತ್ತದೆ. ರಕ್ತದೊತ್ತಡವನ್ನು ಹೆಚ್ಚಿಸುವ ಕೆಲಸವನ್ನು ಈ ಪ್ಯಾಕೇಜ್ ಫುಡ್ ಮಾಡುತ್ತದೆ. ಇದ್ರಿಂದ ನಾನಾ ಖಾಯಿಲೆಗಳು ನಮ್ಮನ್ನು ಕಾಡುತ್ತವೆ.