ಹೆಲ್ತಿಯಾಗಿರಬೇಕು ಅಂತಾ ನೀವೇನಾದ್ರೂ ಡಯಟ್ ಸೋಡಾ ಕುಡಿಯುವ ಅಭ್ಯಾಸ ಮಾಡ್ಕೊಂಡಿದ್ರೆ ತಕ್ಷಣವೇ ಅದನ್ನು ನಿಲ್ಲಿಸಿ. ಯಾಕಂದ್ರೆ ರೆಗ್ಯುಲರ್ ಸೋಡಾ ಮತ್ತು ಡಯಟ್ ಸೋಡಾ ಇವೆರಡರ ಪರಿಣಾಮಗಳಲ್ಲಿ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ. ಇದು ನಿಮ್ಮ ಆರೋಗ್ಯಕ್ಕೆ ಪೂರಕವಾಗುವ ಬದಲು ಮಾರಕವಾಗಬಹುದು.
ಸಂಶೋಧನೆಯೊಂದು ಈ ಬಗ್ಗೆ ಅಧ್ಯಯನ ನಡೆಸಿತ್ತು. ಕಳೆದ ಐದು ವರ್ಷಗಳಿಂದ ಸೋಡಾ ಡಯಟ್ ಸೇವನೆ ಮತ್ತದರ ಪರಿಣಾಮಗಳನ್ನು ಅವಲೋಕಿಸಿ ಈ ತೀರ್ಮಾನಕ್ಕೆ ಬಂದಿದೆ. ಕ್ಯಾಲೋರಿಯಿಲ್ಲದ ಸಿಹಿ ತಿನ್ನಬೇಕೆಂಬ ಜನರ ಹಪಹಪಿಕೆಯನ್ನು ಡಯಟ್ ಸೋಡಾದಲ್ಲಿರುವ ಕೃತಕ ಸ್ವೀಟನರ್ಸ್ ತಣಿಸುತ್ತೆ. ಆದ್ರೆ ನಕಲಿ ಸಕ್ಕರೆ ನಿಜವಾದ ಆಹಾರವನ್ನು ನೀಡುವಂತೆ ನಟಿಸುತ್ತೆ, ಅಸಲಿ ಸಿಹಿಯ ನಿರೀಕ್ಷೆಯಲ್ಲಿರುವ ನಿಮ್ಮ ದೇಹ ಅದಕ್ಕೆ ಹೇಗೆ ಸ್ಪಂದಿಸಬೇಕೆಂದು ತಿಳಿಯದೆ ಗೊಂದಲಕ್ಕೊಳಗಾಗುತ್ತದೆ. ಕೊನೆಗೊಮ್ಮೆ ನೀವು ನಿಜವಾದ ಸಿಹಿ ತಿಂದಾಗ ಅದನ್ನು ಪ್ರಕ್ರಿಯೆಗೊಳಿಸಬೇಕೋ ಬೇಡೋ ಎಂಬ ಗೊಂದಲ ನಿಮ್ಮ ದೇಹಕ್ಕೆ ಉಂಟಾಗುತ್ತದೆ.
ಡಯಟ್ ಸೋಡಾ ಡ್ರಿಂಕರ್ ಗಳು ನಿಜವಾದ ಸಿಹಿ ತಿಂದಾಗ ದೇಹ ಬ್ಲಡ್ ಶುಗರ್ ಮತ್ತು ಬ್ಲಡ್ ಪ್ರೆಶರ್ ನಿಯಂತ್ರಿಸುವ ಹಾರ್ಮೋನ್ ಗಳನ್ನು ಉತ್ಪತ್ತಿ ಮಾಡುವುದಿಲ್ಲ, ಸಿಹಿ ರುಚಿ ಇನ್ಸುಲಿನ್ ಬಿಡುಗಡೆಗೆ ಕಾರಣವಾಗುತ್ತದೆ, ಇದ್ರಿಂದ ಬ್ಲಡ್ ಶುಗರ್ ಇಳಿಕೆಯಾಗುತ್ತದೆ. ಕಾರ್ಬೋಹೈಡ್ರೇಟ್ ಸೇವಿಸದೇ ಇದ್ದಲ್ಲಿ ಬ್ಲಡ್ ಶುಗರ್ ಪ್ರಮಾಣ ಕಡಿಮೆಯಾಗಿ ಹಸಿವು ಮತ್ತು ಸಿಹಿ ತಿನ್ನುವ ಬಯಕೆ ಹೆಚ್ಚಬಹುದು. ಕೃತಕ ಸಿಹಿ ನಿಮ್ಮ ಮೆದುಳಿದ ರಿವಾರ್ಡ್ ಸೆಂಟರ್ ಅನ್ನೇ ನಿಲ್ಲಿಸಬಹುದು, ಪರಿಣಾಮ ಕ್ಯಾಲೋರಿಯುಕ್ತ ಸಿಹಿ ಪದಾರ್ಥಗಳಿಗಾಗಿ ನೀವು ಹಾತೊರೆಯುವಂತಾಗುತ್ತದೆ. ಹಾಗಾಗಿ ಡಯಟ್ ಸೋಡಾವನ್ನು ಪ್ರತಿದಿನ ಸೇವಿಸುವ ಹವ್ಯಾಸ ಬೇಡ, ಅಪರೂಪಕ್ಕೊಮ್ಮೆ ತೆಗೆದುಕೊಳ್ಳಿ.