
ಬೆಂಗಳೂರು: ಏಪ್ರಿಲ್ 1ರ ಮಂಗಳವಾರದಿಂದ ಜಾರಿಗೆ ಬರುವಂತೆ ಹಾಲು, ಮೊಸರು, ವಿದ್ಯುತ್ ದರ ಏರಿಕೆ ಮಾಡಿದ್ದ ರಾಜ್ಯ ಸರ್ಕಾರ ಡೀಸೆಲ್ ದರವನ್ನು ಕೂಡ ಹೆಚ್ಚಿಸಿ ಗ್ರಾಹಕರಿಗೆ ಮತ್ತೊಂದು ದರ ಏರಿಕೆ ಶಾಕ್ ನೀಡಿದೆ.
ಡೀಸೆಲ್ ಬೆಲೆ ಹೆಚ್ಚಳದಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 2000 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ಮಾರಾಟ ತೆರಿಗೆ ಶೇಕಡಾ 18.44 ರಷ್ಟು ಇತ್ತು. ಅದನ್ನು ಮಂಗಳವಾರದಿಂದಲೇ ಜಾರಿಗೆ ಬರುವಂತೆ ಶೇಕಡ 21.17ಕ್ಕೆ ಹೆಚ್ಚಳ ಮಾಡಲಾಗಿದೆ.
ಇದರಿಂದ ಮಾರಾಟ ತೆರಿಗೆ ಶೇಕಡ 2.73 ರಷ್ಟು ಹೆಚ್ಚಳವಾಗಿದೆ. ನಿನ್ನೆಯವರೆಗೆ ಲೀಟರ್ ಗೆ 89.02 ರೂಪಾಯಿ ಇದ್ದ ಡೀಸೆಲ್ ದರ ಇಂದಿನಿಂದ 91.02 ರೂಪಾಯಿ ಆಗಲಿದೆ.
ಡೀಸೆಲ್ ದರ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಕಾಣಲಿದೆ. ಸರಕು ಸಾಗಣೆ ವಾಹನಗಳು ಬಾಡಿಗೆ ಹೆಚ್ಚಳ ಮಾಡಲಿವೆ. ಹೆದ್ದಾರಿ ಟೋಲ್ ಸುಂಕ ಹೆಚ್ಚಳದ ಮರು ದಿನವೇ ಡೀಸೆಲ್ ದರ ಕೂಡ ಏರಿಕೆಯಾಗಿದೆ. ಸರಕು ಸಾಗಣೆದಾರರು ಬೆಲೆ ಏರಿಕೆಯನ್ನು ಜನರಿಗೆ ವರ್ಗಾಯಿಸುತ್ತಾರೆ. ಬಸ್, ಕ್ಯಾಬ್ ದರ ಕೂಡ ಏರಿಕೆಯಾಗಲಿದೆ.
ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆ ಹಾಲು, ವಿದ್ಯುತ್, ಮೊಸರು, ಬಸ್ ಪ್ರಯಾಣದ ಏರಿಕೆಯಿಂದ ತತ್ತರಿಸಿದ್ದು, ಬೆಲೆ ಏರಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.