ಇನ್ಫೋಸಿಸ್ ಸಂಸ್ಥಾಪಕ ಎನ್.ಆರ್. ನಾರಾಯಣ ಮೂರ್ತಿ ಹಾಗೂ ಸುಧಾ ಮೂರ್ತಿ ಬಗ್ಗೆ ತಿಳಿಯದವರು ಯಾರೂ ಇಲ್ಲ. ಇನ್ಪೋಸಿಸ್ನಂತಹ ದೊಡ್ಡ ಸಂಸ್ಥೆಯನ್ನು ಕಟ್ಟಿ ಲಕ್ಷಾಂತರ ಜನರಿಗೆ ಉದ್ಯೋಗವನ್ನು ನೀಡಿರುವ ಈ ದಂಪತಿಯು ಐಟಿ ಲೋಕದಲ್ಲಿ ಮಾಡಿದ ಸಾಧನೆ ಅಗಣ್ಯ.
1976ರಲ್ಲಿ ಪತ್ನಿ ಸುಧಾ ಮೂರ್ತಿ ಜನ್ಮದಿನದಂದು ಉದ್ಯಮಶೀಲತೆಯ ಆಕಾಂಕ್ಷೆಗಳನ್ನು ಮುಂದುವರಿಸಲು ನಾರಾಯಣ ಮೂರ್ತಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಘಟನೆಯನ್ನು ಮನಿ ಕಂಟ್ರೋಲ್ ಸ್ಟಾರ್ಟ್ಅಪ್ ಕಾನ್ಕ್ಲೇವ್ 2023 ಕಾರ್ಯಕ್ರಮದಲ್ಲಿ ನಾರಾಯಣ ಮೂರ್ತಿ ಮೆಲುಕು ಹಾಕಿದ್ದಾರೆ.
ಸೊರೊಕೊ ಸಂಸ್ಥೆಯ ಸಂಸ್ಥಾಪಕರಾದ ರೋಹನ್ ಹೊಸ ಉದ್ಯಮವನ್ನು ಮಾಡಲು ನಿಮ್ಮ ಕುಟುಂಬವನ್ನು ಹೇಗೆ ಒಪ್ಪಿಸಿದಿರಿ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಕುಟುಂಬದ ಬೆಂಬಲ ನನ್ನೊಂದಿಗೆ ಇತ್ತು. ಈ ವಿಚಾರದಲ್ಲಿ ನಾನು ಅದೃಷ್ಟಶಾಲಿ. 1976ರ ಆಗಸ್ಟ್ 19ರಂದು ಸುಧಾ ಮೂರ್ತಿ ಜನ್ಮದಿನದಂದು ನಾನು ಕೆಲಸಕ್ಕೆ ರಾಜೀನಾಮೆ ನೀಡಿದ್ದೆ. ಅಂದು ಆಕೆಗೆ ನಾನು ರಾಜೀನಾಮೆ ನೀಡಿದ್ದೇನೆ ಎಂದು ಹೇಳುತ್ತಾ ಅವಳ ಜನ್ಮದಿನಕ್ಕೆ ಶುಭಕೋರಿದ್ದು ನನಗೆ ಇನ್ನೂ ನೆನಪಿದೆ ಎಂದು ನಾರಾಯಣ ಮೂರ್ತಿ ಹೇಳಿದರು.
ಅವರು ಅಂದು ಸಹ ಯಾವಾಗಲೂ ಮುಗುಳ್ನಗುವಂತೆಯೇ ಮುಗುಳ್ನಕ್ಕರು. ನಾನು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ, ನೀವು ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ ಎಂದು ಸುಧಾಮೂರ್ತಿ ಅಂದು ನನಗೆ ಹೇಳಿದ್ದರು ಎಂದು ನಾರಾಯಣ ಮೂರ್ತಿ ಕಾರ್ಯಕ್ರಮದಲ್ಲಿ ಹೇಳಿದ್ರು. ಕಾರ್ಯಕ್ರಮದಲ್ಲಿ ಹಾಜರಿದ್ದ ಸುಧಾಮೂರ್ತಿ ಎಂದಿನಂತೆ ನಗುತ್ತಿದ್ದರೆ ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟಿತ್ತು.