
ಅಂತರ್ಜಾತಿ ವಿವಾಹವನ್ನು ಉತ್ತೇಜಿಸಲು, ನರೇಂದ್ರ ಮೋದಿ ಸರ್ಕಾರ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಡಿ ಡಾ. ಅಂಬೇಡ್ಕರ್ ಫೌಂಡೇಶನ್ (ಡಿಎಎಫ್) ಆಶ್ರಯದಲ್ಲಿ ಸಾಮಾಜಿಕ ಏಕೀಕರಣಕ್ಕಾಗಿ ಡಾ. ಅಂಬೇಡ್ಕರ್ ಯೋಜನೆಯನ್ನು ಪ್ರಾರಂಭಿಸಿದೆ. ದಲಿತ ಹುಡುಗಿಯನ್ನು ಮದುವೆಯಾದವರಿಗೆ ಈ ಯೋಜನೆಯಡಿ 2.5 ಲಕ್ಷ ರೂಪಾಯಿ ಸಿಗುತ್ತದೆ.
ಅಂತರ್ಜಾತಿ ವಿವಾಹಿತ ದಂಪತಿ ಸಮಾಜದ ಮುಖ್ಯವಾಹಿನಿಗೆ ಸೇರಲು ಸಹಾಯ ಮಾಡುವ ಉದ್ದೇಶದಿಂದ ಹಣಕಾಸಿನ ನೆರವು ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ. ಯೋಜನೆ ಪ್ರಾರಂಭವಾದಾಗ ದಂಪತಿ ವಾರ್ಷಿಕ ಆದಾಯವು 5 ಲಕ್ಷ ರೂಪಾಯಿ ಮೀರಬಾರದು ಎಂದು ಕಡ್ಡಾಯವಾಗಿತ್ತು. 2017 ರಲ್ಲಿ ಆದಾಯ ಮಿತಿಗಳನ್ನು ತೆಗೆದುಹಾಕಲಾಗಿದೆ. ದಂಪತಿ ಆರ್ಥಿಕ ಪರಿಸ್ಥಿತಿಯನ್ನು ಲೆಕ್ಕಿಸದೆ ಪ್ರೋತ್ಸಾಹ ಧನ ಪಡೆಯಬಹುದು.
ಆದ್ರೆ ಒಂದೇ ಬಾರಿ ನಿಮಗೆ ಹಣ ಸಿಗುವುದಿಲ್ಲ. ಎರಡು ಹಂತದಲ್ಲಿ ಈ ಮೊತ್ತವನ್ನು ದಂಪತಿಗೆ ನೀಡಲಾಗುತ್ತದೆ. ಆರಂಭದಲ್ಲಿ ಹೊಸ ಜೀವನ ಶುರು ಮಾಡಲು ದಂಪತಿಗೆ 1.5 ಲಕ್ಷ ರೂಪಾಯಿ ನೀಡಲಾಗುತ್ತದೆ. ಉಳಿದ 1 ಲಕ್ಷವನ್ನು ಅವರ ಜಂಟಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ. ಆದರೆ ಮೂರು ವರ್ಷಗಳ ನಂತರ ಮಾತ್ರ ಈ ಹಣವನ್ನು ಹಿಂಪಡೆಯಬಹುದಾಗಿದೆ.
ಈ ಯೋಜನೆ ಲಾಭ ಪಡೆಯಲು ಅನೇಕ ಷರತ್ತುಗಳಿವೆ. ಹಾಗೆಯೇ ದಾಖಲೆಗಳನ್ನು ನೀಡಬೇಕು. ಸಂಗಾತಿಗಳಲ್ಲಿ ಒಬ್ಬರು ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿರಬೇಕು. ಅರ್ಜಿ ನಮೂನೆಯು ಹಾಲಿ ಸಂಸದ/ಶಾಸಕ/ಜಿಲ್ಲಾಧಿಕಾರಿಗಳ ಶಿಫಾರಸನ್ನು ಹೊಂದಿರಬೇಕು. ಹಿಂದೂ ವಿವಾಹ ಕಾಯ್ದೆ 1955ರ ಅಡಿಯಲ್ಲಿ ವಿವಾಹ ಪ್ರಮಾಣಪತ್ರ ಹೊಂದಿರಬೇಕು. ಪರಿಶಿಷ್ಟ ಜಾತಿ ವರ್ಗಕ್ಕೆ ಸೇರಿದವರು ಜಾತಿ ಪ್ರಮಾಣಪತ್ರ, ಜಂಟಿ ಬ್ಯಾಂಕ್ ಖಾತೆ ಇತ್ಯಾದಿ ಮಾಹಿತಿ ನೀಡಬೇಕು.
ಇಬ್ಬರಿಗೂ ಇದು ಮೊದಲ ಮದುವೆ ಆಗಿರಬೇಕು. ಮದುವೆಯಾದ ಒಂದು ವರ್ಷದೊಳಗೆ ಪ್ರಸ್ತಾವನೆ ಸಲ್ಲಿಸಿದರೆ ಮಾತ್ರ ಅದನ್ನು ಮಾನ್ಯವೆಂದು ಪರಿಗಣಿಸಲಾಗುತ್ತದೆ. ಮಾನಸಿಕ ಅಸ್ವಸ್ಥತೆ, ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರಬಾರದು. ಮದುವೆಯ ಸಮಯದಲ್ಲಿ, ವರನ ವಯಸ್ಸು ಇಪ್ಪತ್ತೊಂದು ವರ್ಷಗಳು ಮತ್ತು ವಧುವಿನ ವಯಸ್ಸು ಹದಿನೆಂಟು ವರ್ಷವಾಗಿರಬೇಕು.