ನವದೆಹಲಿ: ಸ್ಕೂಟರ್ನಲ್ಲಿ ಹೋಗುತ್ತಿದ್ದ ಯುವತಿಯ ಬಟ್ಟೆ ಪಕ್ಕದಲ್ಲಿ ಬರುತ್ತಿದ್ದ ಕಾರಿನ ಚಕ್ರಕ್ಕೆ ಸಿಲುಕಿ ಅಪಘಾತವಾಗಿರುವ ಭಯಾನಕ ಘಟನೆ ದೆಹಲಿಯಲ್ಲಿ ಹೊಸ ವರ್ಷದಂದು ನಡೆದಿತ್ತು. ಆಯತಪ್ಪಿ ಬಿದ್ದ ಯುವತಿಯ ಬಟ್ಟೆ ಚಕ್ರಕ್ಕೆ ಸಿಲುಕಿದ್ದರಿಂದ ಅದರ ಅರಿವು ಇಲ್ಲದ ಕಾರು ಚಾಲಕ ಕಾರನ್ನು ಚಾಲನೆ ಮಾಡುತ್ತಲೇ ಸಾಗಿದ್ದರಿಂದ ಯುವತಿ ನೋವಿನಲ್ಲಿ ಮೃತಪಟ್ಟಿದ್ದಳು.
ಕೆಲವು ಕಿಲೋಮೀಟರ್ಗಳವರೆಗೆ ಯುವತಿಯನ್ನು ಕಾರು ಎಳೆದುಕೊಂಡು ಹೋಗಿತ್ತು. ಬಟ್ಟೆ ಸಂಪೂರ್ಣ ಚಕ್ರಕ್ಕೆ ಸಿಲುಕಿದೆ. ಬೆತ್ತಲೆ ದೇಹವನ್ನು ನೋಡಿದ್ದ ಸ್ಥಳೀಯರು ಆಕೆಯ ಮೇಲೆ ಅತ್ಯಾಚಾರ ಎಸಗಿ ಎಸೆದು ಹೋಗಲಾಗಿದೆ ಎಂದು ಭಾವಿಸಿದ್ದರು. ಪೊಲೀಸರು ಕೂಡ ಹಾಗೆಯೇ ಭಾವಿಸಿದ್ದರು. ನಂತರ ಇದು ರೇಪ್ ಕೇಸ್ ಅಲ್ಲ ಎಂದು ತಿಳಿದಿತ್ತು.
ಇದೀಗ ಈ ವಿಷಯದ ಬಗ್ಗೆ ಇನ್ನಷ್ಟು ಮಾಹಿತಿ ಹೊರಕ್ಕೆ ಬಂದಿದೆ. ಅದೇನೆಂದರೆ, ಯುವತಿ ಕಾರಿಗೆ ಸಿಕ್ಕಿಬಿದ್ದಿರುವುದು ಆರೋಪಿಗಳಿಗೆ ತಿಳಿದಿತ್ತು. ಆದರೆ ಕಾರನ್ನು ನಿಲ್ಲಿಸಿ ಆಕೆಯನ್ನು ರಕ್ಷಿಸಿದರೆ ತಮ್ಮ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗುವುದು ಎಂದು ಆರೋಪಿಗಳು ಹೆದರಿ ಕಾರನ್ನು ಚಲಾಯಿಸಿಕೊಂಡು ಹೋಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಮೃತ ಯುವತಿಯನ್ನು ಅಂಜಲಿ ಸಿಂಗ್ ಎಂದು ಗುರುತಿಸಲಾಗಿದೆ. ಆಕೆ ಬಿದ್ದಾಗ ಸುಮಾರು 12 ಕಿ.ಮೀ ವರೆಗೆ ಕಾರಿನಿಂದ ಎಳೆದೊಯ್ದಿರುವ ಬಗ್ಗೆ ಪೊಲೀಸರು ಹೇಳಿದ್ದಾರೆ. ಆರೋಪಿಗಳು ಮದ್ಯ ಸೇವನೆ ಮಾಡಿರಲಿಲ್ಲ ಎಂದು ತನಿಖೆಯಿಂದ ತಿಳಿದು ಬಂದಿದ್ದು, ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.