ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೇಳಿ ಅನ್ನಭಾಗ್ಯ ಯೋಜನೆ ಘೋಷಣೆ ಮಾಡಿದ್ರಾ? ಎಂಬ ಹರಿಹರ ಬಿಜೆಪಿ ಶಾಸಕ ಬಿ.ಹರೀಶ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆ ಉದ್ಘಾಟನೆ ವೇಳೆ ಗದ್ದಲ-ಕೋಲಾಹಲ ನಡೆದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಯೋಜನೆ ಉದ್ಘಾಟನೆ ವೇಳೆ ಹರಿಹರ ಬಿಜೆಪಿ ಶಾಸಕ ಬಿ.ಪಿ.ಹರೀಶ್, ಪ್ರಧಾನಿ ಮೋದಿಯವರನ್ನು ಕೇಳಿ ಅನ್ನಭಾಗ್ಯ ಘೋಷಣೆ ಮಾಡಿದ್ದೀರಾ? ಎಂದು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರು, ನೆರೆದಿದ್ದ ಸಾರ್ವಜನಿಕರು, ಶಾಸಕರನ್ನೇ ತರಾಟೆಗೆ ತೆಗೆದುಕೊಂಡರು.
ಅನ್ನಭಾಗ್ಯ ಯೋಜನೆಯಡಿ 5 ಕೆಜಿ ಅಕ್ಕಿ ನೀಡಲಾಗುತ್ತಿದೆ. ಹೆಚ್ಚುವರಿ 5 ಕೆಜಿ ಅಕ್ಕಿ ಬದಲಾಗಿ ಖಾತೆಗೆ ಹಣ ಹಾಕಲಾಗುತ್ತಿದೆ. ಆದರೂ ಸರ್ಕಾರದ ವಿರುದ್ಧ ಆರೋಪ ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.
ವೇದಿಕೆ ಮೇಲೆ ಬಂದು ಬಿಜೆಪಿ ಶಾಸಕರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಕಿಡಿಕಾರಿದ ಘಟನೆ ನಡೆಯಿತು. ಸಮಾರಂಭದಲ್ಲಿ ಕೆಲ ಕಾಲ ಗದ್ದಲ-ಕೋಲಾಹಲವುಂಟಾಗಿದ್ದು, ಬಳಿಕ ಜಿಲ್ಲಾ ಉಸ್ತುವರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪರಿಸ್ಥಿತಿ ತಿಳಿಗೊಳಿಸಿದರು.