ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆಯಲಿರುವ ಜಿ 20 ಶೃಂಗಸಭೆಯಲ್ಲಿ ಭಾಗಿಯಾಗಲು ನೈಜೀರಿಯಾದ ಅಧ್ಯಕ್ಷ ಬೋಲಾ ಅಹ್ಮದ್ ಟಿನುಬಾ ಮಂಗಳವಾರ ಸಂಜೆ ಭಾರತಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಬೋಲಾ ಅಹ್ಮದ್ಗೆ ನೀಡಲಾದ ಸ್ವಾಗತದ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗ್ತಿದೆ.
ದೆಹಲಿಯಲ್ಲಿರೋ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬೋಲಾ ಅಹ್ಮದ್ ಟಿನುಬಾರಿಗೆ ಜನಪ್ರಿಯ ಮರಾಠಿ ಹಾಡನ್ನು ನುಡಿಸುವುದರ ಮೂಲಕ ಸ್ವಾಗತ ಕೋರಲಾಗಿದೆ. ಆದರೆ ಇದು ನಿಜವಾದ ಸುದ್ದಿಯೇ ಎಂಬುದರ ಬಗ್ಗೆ ಇನ್ನೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ಅನೇಕರು ಹೇಳುತ್ತಿದ್ದಾರೆ. ವಾಜ್ಲೆ ಕಿ ಬಾರಾ ಎಂಬ ಹಾಡಿನ ಮೂಲಕ ನೈಜೀರಿಯಾ ಅಧ್ಯಕ್ಷರಿಗೆ ಸ್ವಾಗತ ಕೋರಲಾಗಿದೆ ಎಂದು ಈ ವಿಡಿಯೋ ನೋಡಿ ಹೇಳಬಹುದಾಗಿದೆ. ಆದರೆ ನಿಜವಾಗಿಯೂ ಏರ್ಪೋರ್ಟ್ನಲ್ಲಿ ಈ ಹಾಡನ್ನು ಪ್ರಸಾರ ಮಾಡಿದ್ದರೇ ಎಂಬುದಕ್ಕೆ ಯಾವುದೇ ಅಧಿಕೃತ ಪುರಾವೆಗಳಿಲ್ಲ.
ಕೆಲವರು ಈ ಹಾಡನ್ನು ಸ್ವಾಗತಕ್ಕೆ ಬಳಕೆ ಮಾಡಿದ್ದನ್ನು ಒಪ್ಪಿಕೊಂಡರೆ ಇನ್ನೂ ಕೆಲವರು ದೇಶದ ಶ್ರೀಮಂತ ಸಂಸ್ಕೃತಿಯನ್ನು ಸಾರುವಂತಹ ಉತ್ತಮ ಹಾಡನ್ನು ಗಣ್ಯ ವ್ಯಕ್ತಿಯ ಸ್ವಾಗತಕ್ಕೆ ಬಳಕೆ ಮಾಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮರಾಠಿ ಲಾವಣಿ ಗೀತೆಗಳನ್ನೇ ಬಳಸಿ ಗಣ್ಯರನ್ನು ವೆಲ್ಕಂ ಮಾಡಬಹುದಿತ್ತು ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.