ಕೆನಡಾದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಅನ್ನು ನಿಷೇಧಿಸುವ ಬಗ್ಗೆ ವ್ಯಕ್ತಿಯೊಬ್ಬ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಕೆನಡಾ ಸರ್ಕಾರ ಈ ಘೋಷಣೆ ಮಾಡಿದೆ ಎಂದು ಹೇಳಿಕೊಳ್ಳುತ್ತಿದೆ.
ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಕೆನಡಾ ಮತ್ತು ಭಾರತದ ನಡುವೆ ರಾಜತಾಂತ್ರಿಕ ಉದ್ವಿಗ್ನತೆಯ ನಡುವೆ ಈ ವಿಡಿಯೋ ಹೊರ ಬಂದಿದೆ.
ವಿಡಿಯೋದಲ್ಲಿ ವ್ಯಕ್ತಿ ಎನ್‌ಸಿಸಿಎಂ ನಾಲ್ಕು ಹೆಚ್ಚುವರಿ ಕ್ರಮಗಳಿಗೆ ಕರೆ ನೀಡುತ್ತಿದೆ ಎಂದು ಹೇಳುತ್ತಾನೆ.
ಭಾರತದಲ್ಲಿರುವ ಕೆನಡಾದ ರಾಯಭಾರಿಯನ್ನು ತಕ್ಷಣವೇ ಹಿಂಪಡೆಯುವುದು.
ಕೆನಡಾದಲ್ಲಿರುವ ಭಾರತೀಯ ರಾಯಭಾರಿಯನ್ನು ಹೊರಹಾಕುವುದು.
ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ(ಸಿಇಪಿಎ) ಸೇರಿದಂತೆ ಉಭಯ ದೇಶಗಳ ನಡುವಿನ ವ್ಯಾಪಾರ ಮಾತುಕತೆಗಳನ್ನು ಫ್ರೀಜ್ ಮಾಡುವುದು.
ಕ್ರಿಮಿನಲ್ ಕೋಡ್‌ನ ಅಡಿಯಲ್ಲಿ ಪಟ್ಟಿ ಮಾಡುವ ನಿಬಂಧನೆಗಳ ಅಡಿಯಲ್ಲಿ RSS ಅನ್ನು ನಿಷೇಧಿಸುವುದು ಮತ್ತು ಕೆನಡಾದಿಂದ ಅದರ ಏಜೆಂಟ್‌ಗಳನ್ನು ತೆಗೆದುಹಾಕುವುದು ಎಂದು ಹೇಳಿದ್ದಾನೆ.
ಕೆನಡಾದ ಸರ್ಕಾರವು ಆರ್‌ಎಸ್‌ಎಸ್ ಅನ್ನು ನಿಷೇಧಿಸಿಲ್ಲ. ಅಥವಾ ನ್ಯಾಷನಲ್ ಕೌನ್ಸಿಲ್ ಆಫ್ ಕೆನಡಿಯನ್ ಮುಸ್ಲಿಂಸ್(ಎನ್‌ಸಿಸಿಎಂ) ಸಿಇಒ ಸ್ಟೀಫನ್ ಬ್ರೌನ್ ಮಾಡಿದ ಈ ಬೇಡಿಕೆಗೆ ಪ್ರತಿಕ್ರಿಯಿಸಿಲ್ಲ. ಆರ್.ಎಸ್.ಎಸ್. ಬ್ಯಾನ್ ಎನ್ನುವುದು ಸುಳ್ಳು ಸುದ್ದಿ. ವಿಡಿಯೋದಲ್ಲಿರುವುದು ಸರ್ಕಾರಿ ಅಧಿಕಾರಿಯಲ್ಲ. ಎನ್.ಜಿ.ಒ.ವೊಂದರ ಪ್ರತಿನಿಧಿ ಎಂದು ಹೇಳಲಾಗಿದೆ.