ಬೆಂಗಳೂರು: ಗೃಹ ಆರೋಗ್ಯ ಯೋಜನೆಯಡಿ ಮೂರು ತಿಂಗಳಿಗೆ ಆಗುವಷ್ಟು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದ ಮಾತ್ರೆಗಳನ್ನು ಒಳಗೊಂಡ ಔಷಧ ಪೆಟ್ಟಿಗೆ ಉಚಿತವಾಗಿ ವಿತರಿಸಲು ಆರೋಗ್ಯ ಇಲಾಖೆ ಮುಂದಾಗಿದೆ.
ರಾಜ್ಯ ಸರ್ಕಾರ ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಗೃಹ ಆರೋಗ್ಯ ಯೋಜನೆ ಜಾರಿಗೊಳಿಸುತ್ತಿದೆ. ಬಿಪಿ ಹಾಗೂ ಮಧುಮೇಹಕ್ಕೆ ಮಾತ್ರೆಗಳನ್ನು ನಿಗದಿಪಡಿಸಿದ್ದು, ತಲಾ 90 ಮಾತ್ರೆಗಳನ್ನು ಒಳಗೊಂಡ ಔಷಧ ಪೆಟ್ಟಿಗೆಗಳನ್ನು ಸಿದ್ಧಪಡಿಸಲಾಗಿದೆ.
ಆರೋಗ್ಯ ಇಲಾಖೆಯ ತಪಾಸಣಾ ತಂಡಗಳು ಮನೆಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಲಿವೆ. ಅಲ್ಲದೇ, ಜಾಗೃತಿ ಸಂದೇಶ, ಯೋಜನೆ ವಿವರ ಒಳಗೊಂಡ ಸ್ಟಿಕ್ಕರ್ ಗಳನ್ನು ಮನೆಗೆ ಅಂಟಿಸಲಿವೆ. ತಪಾಸಣೆ ವೇಳೆ ಸಮಸ್ಯೆ ಇರುವುದು ಕಂಡು ಬಂದಲ್ಲಿ, ಈಗಾಗಲೇ ಬಿಪಿ, ಮಧುಮೇಹ ಸಮಸ್ಯೆ ಇರುವವರಿಗೆ ಮಧುಮೇಹ ಮತ್ತು ಬಿಪಿ ಮಾತ್ರೆಗಳನ್ನು ಉಚಿತವಾಗಿ ವಿತರಿಸಲಾಗುವುದು.
ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ಮನೆ ಬಾಗಿಲಿಗೆ ತಲುಪಿಸಲಿದ್ದು, ಅವುಗಳು ಖಾಲಿಯಾದ ಬಳಿಕ ಮತ್ತೆ ಮೂರು ತಿಂಗಳಿಗೆ ಆಗುವಷ್ಟು ಮಾತ್ರೆಗಳನ್ನು ನೀಡಲಾಗುವುದು. 30 ವರ್ಷ ಮೇಲ್ಪಟ್ಟವರು ಮಾತ್ರೆ ಪಡೆಯಲು ಅರ್ಹರಾಗಿರುತ್ತಾರೆ. ಸರ್ಕಾರದಿಂದ ಮಧುಮೇಹ ಮತ್ತು ಅಧಿಕಾರಕ್ಕೆ ಒತ್ತಡಕ್ಕೆ ತಲಾ ಮೂರು ರೀತಿ ಮಾತ್ರೆಗಳನ್ನು ಗುರುತಿಸಿದ್ದು, ಅವುಗಳನ್ನು ನೀಡಲಾಗುವುದು.
ಮೊದಲಿಗೆ ರಾಮನಗರ, ತುಮಕೂರು, ಬೆಳಗಾವಿ, ಗದಗ, ಬಳ್ಳಾರಿ, ಯಾದಗಿರಿ, ದಕ್ಷಿಣ ಕನ್ನಡ, ಮೈಸೂರು ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಲಿದೆ ಎನ್ನಲಾಗಿದೆ.