ಮಧುಮೇಹಿಗಳಿಗೆ ಅನ್ನ ತಿಂದರೆ ತೊಂದರೆಯಾಗುತ್ತದೆ ಎನ್ನುವ ಭಯ ಸಾಮಾನ್ಯವಾಗಿ ಕಾಡುತ್ತಿರುತ್ತದೆ. ಆದರೆ ಸರಿಯಾದ ಕ್ರಮದಲ್ಲಿ ಅನ್ನವನ್ನು ತಯಾರಿಸಿ ಊಟ ಮಾಡುವುದರಿಂದ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗುತ್ತದೆ.
ಆದರೆ ಆ ಅನ್ನವನ್ನು ಹೇಗೆ ತಯಾರಿಸಬೇಕು, ಎಷ್ಟು ಹೊತ್ತು ಬೇಯಿಸಬೇಕು? ಕುಕ್ಕರ್ ನಲ್ಲಿ ಬೇಯಿಸಬೇಕೇ? ಬೇಯಿಸಬಾರದೇ? ಎಂಬೆಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.
ಮಧುಮೇಹಿ ರೋಗಿಗಳಿಗೆ ಕುಕ್ಕರ್ ನಲ್ಲಿ ಅನ್ನವನ್ನು ಬೇಯಿಸಬಾರದು. ಅದಕ್ಕೆ ಬದಲಾಗಿ ನಮ್ಮ ಪೂರ್ವಿಕರು ಅನುಸರಿಸುತ್ತಿದ್ದ ಪಾರಂಪರಿಕ ವಿಧಾನದಿಂದ ತಯಾರಿಸುತ್ತಿದ್ದ ಅನ್ನ ಬಹಳ ಉತ್ತಮ.
ಅನ್ನವನ್ನು ಮಾಡಲು ಉಪಯೋಗಿಸುವ ಅಕ್ಕಿಯನ್ನು ನೀರಿನಲ್ಲಿ 15-20 ನಿಮಿಷ ನೆನೆಯಲು ಇಡಬೇಕು. ಒಲೆಯ ಮೇಲೆ ಅನ್ನ ಮಾಡಲು ಬೇಕಾದ ನೀರನ್ನು ಕಾಯಲು ಇಡಬೇಕು. ಈ ನೀರಿನ ಪ್ರಮಾಣ ಅಕ್ಕಿಯ ಪ್ರಮಾಣದ 8 ರಷ್ಟು ಹೆಚ್ಚು ಇರಬೇಕು. ನೀರು ಚೆನ್ನಾಗಿ ಕಾಯ್ದು ಕುದಿಯಲು ಪ್ರಾರಂಭಿಸಿದಾಗ, ನೆನೆಯಲು ಇಟ್ಟಿರುವ ಅಕ್ಕಿಯನ್ನು ಚೆನ್ನಾಗಿ ತೊಳೆದು ನೀರನೆಲ್ಲಾ ಬಸಿದು, ಕುದಿಯುತ್ತಿರುವ ನೀರಿನಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಬೇಯಿಸಬೇಕು.
ಬೇಯುವಾಗ ಪಾತ್ರೆಯ ಬಾಯನ್ನು ಮುಚ್ಚಬೇಕು ಬಳಿಕ ಅಕ್ಕಿ ತಳಕಟ್ಟದ ಹಾಗೆ ಆಗಾಗ ಸೌಟಿನಿಂದ ತಿರುವುತ್ತಿರಬೇಕು. ಅಕ್ಕಿ ಹದವಾಗಿ ಬೆಂದು ಮೆತ್ತಗಾದಾಗ ಅದರಲ್ಲಿರುವ ಗಂಜಿಯನ್ನು ಬಸಿದು ಪಾತ್ರೆಯ ಬಾಯಿಯನ್ನು ಮುಚ್ಚಿ ಸ್ವಲ್ಪ ಹೊತ್ತು ಸಣ್ಣ ಉರಿಯಲ್ಲಿ ಬೇಯಿಸಬೇಕು. ಇದರಿಂದ ಅನ್ನ ಚೆನ್ನಾಗಿ ಅರಳಿ, ಮುದ್ದೆಯಾಗದೆ, ಹುಡಿ ಹುಡಿಯಾಗಿ ಸಿದ್ಧವಾಗುತ್ತದೆ.
ಈ ಅನ್ನವನ್ನು ಮಧುಮೇಹಿ ರೋಗಿಗಳು ತಮ್ಮ ಪ್ರಮುಖ ಆಹಾರವನ್ನಾಗಿ ಊಟ ಮಾಡಬಹುದು. ಈ ರೀತಿ ಪಾರಂಪರಿಕ ವಿಧಾನದಿಂದ ತಯಾರಾದ ಅನ್ನದಲ್ಲಿ ಶರ್ಕರ ಪಿಷ್ಠ ಅಂಶವು ಕಡಿಮೆ ಇದ್ದು ಮಧುಮೇಹಿ ರೋಗಿಗಳಿಗೆ ಪಥ್ಯವಾಗಿರುವುದು.