ರೋಗಗಳು ಮನುಷ್ಯನಿಗೆ ಬರುವುದು ಸಹಜ. ಕೆಲವರಿಗೆ ವಯೋ ಸಹಜ ಕಾಯಿಲೆಗಳಿರುತ್ತವೆ. ಈ ಕಾಯಿಲೆಗಳಿಂದ ಮತ್ತೊಂದು ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆಗಳು ಇರುತ್ತವೆ. ಮಧುಮೇಹ ರೋಗಿಯ ಬಿಪಿ ರಾತ್ರಿ ಹೆಚ್ಚಾಗ್ತಿದ್ದರೆ ಅದು ಇನ್ನೊಂದು ಮಾರಕ ರೋಗಕ್ಕೆ ಮುನ್ನುಡಿಯಾಗಬಹುದು. ಅಧ್ಯಯನದ ಪ್ರಕಾರ, ಟೈಪ್ 1 ಮತ್ತು ಟೈಪ್ 2 ರೋಗಿಗಳು ರಾತ್ರಿ ವೇಳೆ ಬಿಪಿಯಲ್ಲಿ ಹಠಾತ್ ಹೆಚ್ಚಳ ಹೊಂದಿದ್ದರೆ ಅಪಾಯ ಹೆಚ್ಚು.
ಟೈಪ್ 1 ಮತ್ತು ಟೈಪ್ 2 ಮಧುಮೇಹಿಗಳ ರಕ್ತದೊತ್ತಡ ಮಟ್ಟವೂ ನಿಯಂತ್ರಣದಲ್ಲಿರುವುದು ಮುಖ್ಯ. ಅಮೇರಿಕನ್ ಹಾರ್ಟ್ ಅಸೋಸಿಯೇಶನ್ ಹೈಪರ್ಟೆನ್ಶನ್ ಸೈಂಟಿಫಿಕ್ ನಲ್ಲಿ ಇತ್ತೀಚೆಗೆ ಪ್ರಕಟವಾದ ಅಧ್ಯಯನದ ಪ್ರಕಾರ, ಟೈಪ್ 1 ಅಥವಾ ಟೈಪ್ 2 ಡಯಾಬಿಟಿಸ್ ಇರುವ ರೋಗಿಗಳ,ಬಿಪಿ ರಾತ್ರಿಯಲ್ಲಿ ಏರುತ್ತಿದ್ದರೆ ಜಾಗರೂಕರಾಗಿರಬೇಕು.
ನಿದ್ರೆಯ ಸಮಯದಲ್ಲಿ ರಕ್ತದೊತ್ತಡವು ಸಾಮಾನ್ಯವಾಗಿ ಕಡಿಮೆಯಾಗುತ್ತದೆ. ಆದರೆ ಬಿಪಿ ರಾತ್ರಿಯಲ್ಲಿ ಹೆಚ್ಚಾಗಲು ಪ್ರಾರಂಭಿಸಿದರೆ ಇದನ್ನು ರಿವರ್ಸ್ ಡಿಪ್ಪಿಂಗ್ ಎಂದು ಕರೆಯಲಾಗುತ್ತದೆ. 10 ಜನರಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಡುತ್ತದೆ.
ಇಟಲಿಯ ಪಿಸಾ ವಿಶ್ವವಿದ್ಯಾಲಯದ ಕ್ಲಿನಿಕಲ್ ಮತ್ತು ಎಕ್ಸ್ಪೆರಿಮೆಂಟಲ್ ಮೆಡಿಸಿನ್ ವಿಭಾಗದ ತನಿಖಾಧಿಕಾರಿಯಾದ ಮಾರ್ಟಿನಾ ಚಿರಿಯಾಕ್ಕೊ ಪ್ರಕಾರ, ಟೈಪ್ 1 ಮತ್ತು ಟೈಪ್ 2 ಡಯಾಬಿಟಿಸ್ ಇರುವ ರೋಗಿಗಳು ನಿಯಮಿತವಾಗಿ ಬಿಪಿ ಪರೀಕ್ಷೆ ಮಾಡಿಸಿಕೊಳ್ಳಬೇಕು. 1999 ರಲ್ಲಿ ಇಟಲಿಯ ಪಿಸಾದಲ್ಲಿ 359 ವಯಸ್ಕರ ಮೇಲೆ ಅಧ್ಯಯನವನ್ನು ನಡೆಸಲಾಯಿತು. ಅಧ್ಯಯನದ ಅರ್ಧಕ್ಕಿಂತ ಹೆಚ್ಚು ಜನರು ರಾತ್ರಿ ರಕ್ತದೊತ್ತಡ ಹೆಚ್ಚಳ ಸಮಸ್ಯೆ ಅನುಭವಿಸುತ್ತಿದ್ದರು. ಡಿಪ್ಪರ್ ಗಳಿಗೆ ಹೋಲಿಸಿದರೆ ರಿವರ್ಸ್ ಡಿಪ್ಪರ್ ಹೊಂದಿರುವ ಜನರು 2.5 ವರ್ಷಕ್ಕಿಂತ ಕಡಿಮೆ ಬದುಕುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ.