ಚಾಮರಾಜನಗರ: ನಿನ್ನೆ ನಿಧನರಾದ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ ಮಣ್ಣಲ್ಲಿ ಮಣ್ಣಾಗಿದ್ದಾರೆ. ಪೊಲೀಸ್ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಗಿದೆ.
ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಸಮೀಪ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅವರ ತಂದೆ -ತಾಯಿ ಸಮಾಧಿ ಪಕ್ಕದಲ್ಲಿಯೇ ಧ್ರುವನಾರಾಯಣ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅವರ ಪುತ್ರರಾದ ದರ್ಶನ್ ಮತ್ತು ಧೀರನ್ ಅವರು ಅಂತಿಮ ವಿಧಿ ವಿಧಾನ ಪೂರೈಸಿದ್ದಾರೆ.
ಅಂತ್ಯಕ್ರಿಯೆಯಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಶಾಮನೂರು ಶಿವಶಂಕರಪ್ಪ, ಜಿ.ಟಿ. ದೇವೇಗೌಡ, ದಿನೇಶ್ ಗುಂಡೂರಾವ್, ಈಶ್ವರ ಖಂಡ್ರೆ, ಸತೀಶ ಜಾರಕಿಹೊಳಿ, ಸಲೀಂ ಅಹಮದ್, ಆರ್. ನರೇಂದ್ರ, ಪುಟ್ಟರಂಗಶೆಟ್ಟಿ, ಹರ್ಷವರ್ಧನ್, ಅನಿಲ್ ಚಿಕ್ಕಮಾದು, ಡಾ. ಯತೀಂದ್ರ, ಡಾ. ಪುಷ್ಪ ಅಮರನಾಥ್ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ. ಅಗಲಿದ ನಾಯಕನಿಗೆ ಅಪಾರ ಜನಸ್ತೋಮ ಕಣ್ಣೀರನ ವಿದಾಯ ಹೇಳಿದೆ.
ಟಿಕೆಟ್ ಘೋಷಣೆಗೆ ಒತ್ತಾಯ
ಧ್ರುವನಾರಾಯಣ ಅಂತ್ಯಕ್ರಿಯೆ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಸಮೀಪ ತೋಟದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅಂತ್ಯಕ್ರಿಯೆಗೆ ಮೊದಲು ಧ್ರುವನಾರಾಯಣ ಪುತ್ರ ದರ್ಶನ್ ಅವರಿಗೆ ಟಿಕೆಟ್ ಘೋಷಿಸಬೇಕೆಂದು ಒತ್ತಾಯಿಸಲಾಗಿದೆ. ದರ್ಶನ್ ಅವರಿಗೆ ನಂಜನಗೂಡು ಕ್ಷೇತ್ರದ ಟಿಕೆಟ್ ಘೋಷಿಸಬೇಕೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಸಿ.ಎಲ್.ಪಿ. ನಾಯಕ ಸಿದ್ದರಾಮಯ್ಯ ಅವರಿಗೆ ಬೆಂಬಲಿಗರು ಒತ್ತಾಯಿಸಿದ್ದಾರೆ. ನಿನ್ನೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಅಭಿಮಾನಿಗಳು ಮನವಿ ಮಾಡಿದ್ದರು.