ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಅತ್ಯಂತ ಜನಪ್ರಿಯರಾಗಿರೋ ಆಟಗಾರ. ಕ್ರಿಕೆಟ್ ಹೊರತಾಗಿ ವ್ಯಾಪಾರ ವಹಿವಾಟಿನಲ್ಲೂ ಮಾಹಿ ಸೈ ಎನಿಸಿಕೊಂಡಿದ್ದಾರೆ. ಅನೇಕ ಟಾಪ್ ಬ್ರಾಂಡ್‌ಗಳಿಗೆ ಅಂಬಾಸಿಡರ್ ಮತ್ತು ಹೂಡಿಕೆದಾರರಾಗಿದ್ದಾರೆ. ಧೋನಿ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿ ವರ್ಷಗಳೇ ಕಳೆದಿವೆ. T20 ಲೀಗ್ IPL ನಲ್ಲಿ ಮಾತ್ರ ಧೋನಿ ಆಡ್ತಿದ್ದಾರೆ. ಆದರೂ ಧೋನಿ ಗಳಿಕೆ ಮಾತ್ರ ಕಡಿಮೆಯಾಗಿಲ್ಲ.
ಇದಕ್ಕೆ ಸಾಕ್ಷಿ ಅವರು ಪಾವತಿಸಿದ ತೆರಿಗೆ. ಮಹೇಂದ್ರ ಸಿಂಗ್ ಧೋನಿ ಹಲವಾರು ವರ್ಷಗಳಿಂದ ಜಾರ್ಖಂಡ್ ರಾಜ್ಯದ ಅತಿ ದೊಡ್ಡ ತೆರಿಗೆದಾರರಾಗಿ ಗುರುತಿಸಿಕೊಂಡಿದ್ದಾರೆ. ಜಾರ್ಖಂಡ್ ಕೈಗಾರಿಕೆ ಮತ್ತು ಉದ್ಯಮಗಳಿಗೆ ಹೆಸರಾದ ರಾಜ್ಯ. ಮಹೇಂದ್ರ ಸಿಂಗ್ ಧೋನಿ ಅನೇಕ ವರ್ಷಗಳಿಂದ ಆದಾಯ ತೆರಿಗೆ ಪಾವತಿಸುವಲ್ಲಿ ಇಡೀ ಜಾರ್ಖಂಡ್‌ನಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. 2022-23 ರ ಹಣಕಾಸು ವರ್ಷದಲ್ಲಿ ಸಹ ಧೋನಿ ರಾಜ್ಯದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಅವರ ಗಳಿಕೆಯ ಮೇಲೆ ಗಮನಾರ್ಹ ಪರಿಣಾಮ ಬೀರಿಲ್ಲ.
ಆದಾಯ ತೆರಿಗೆ ಇಲಾಖೆಗೆ ನೀಡಿರುವ ಮುಂಗಡ ತೆರಿಗೆಯನ್ನು ನೋಡಿದರೆ ಅವರ ಗಳಿಕೆ ಬಹುತೇಕ ಹಳೆಯ ಮಟ್ಟದಲ್ಲಿದೆ. ಮಹೇಂದ್ರ ಸಿಂಗ್ ಧೋನಿ ಕಳೆದ ಹಣಕಾಸು ವರ್ಷದಲ್ಲಿ ಮುಂಗಡವಾಗಿ 38 ಕೋಟಿ ರೂಪಾಯಿ ಆದಾಯ ತೆರಿಗೆ ಪಾವತಿಸಿದ್ದರು. ವರ್ಷದ ಹಿಂದೆ ಕೂಡ ಅದೇ ಮೊತ್ತವನ್ನು ಠೇವಣಿ ಮಾಡಿದ್ದರು. 2020-21ರಲ್ಲಿ 30 ಕೋಟಿ ರೂಪಾಯಿ ಮುಂಗಡ ತೆರಿಗೆ ಪಾವತಿಸಿದ್ದರು. ಧೋನಿ ಗಳಿಕೆ ವರ್ಷಕ್ಕೆ ಅಂದಾಜು 130 ಕೋಟಿ ರೂಪಾಯಿ ಅಂತ ಹೇಳಲಾಗ್ತಿದೆ.
ಮಹೇಂದ್ರ ಸಿಂಗ್ ಧೋನಿ ಕ್ರಿಕೆಟ್ ಜೊತೆಗೆ ವ್ಯಾಪಾರ ಮತ್ತು ಹೂಡಿಕೆ ಕ್ಷೇತ್ರದಲ್ಲೂ ತೊಡಗಿಸಿಕೊಂಡಿರುವುದರಿಂದ ಅವರ ಆದಾಯಕ್ಕೆ ಕೊರತೆಯಾಗಿಲ್ಲ. ಉದಯೋನ್ಮುಖ ಕಂಪನಿಗಳಲ್ಲಿ ಧೋನಿ ಗಮನಾರ್ಹ ಹೂಡಿಕೆಗಳನ್ನು ಮಾಡಿದ್ದಾರೆ. ಡ್ರೋನ್ ಕಂಪನಿ ಗರುಡಾ ಏರೋಸ್ಪೇಸ್, ಇಂಟೀರಿಯರ್ ಡೆಕೋರೇಶನ್ ಕಂಪನಿ ಹೋಮ್‌ಲೇನ್, ಫಿನ್‌ಟೆಕ್ ಕಂಪನಿ ಖಾಟಾಬುಕ್, ಬಳಸಿದ ಕಾರು ವ್ಯಾಪಾರ ಕಂಪನಿ ಕಾರ್ಸ್ 24 ಸೇರಿದಂತೆ ಅನೇಕ ಕಡೆಗಳಲ್ಲಿ ಧೋನಿ ಹಣ ಹೂಡಿದ್ದಾರೆ.
ಇವುಗಳ ಹೊರತಾಗಿ ಅವರು ಸೆವೆನ್ (7) ಹೆಸರಿನ ಫ್ಯಾಷನ್ ಮತ್ತು ಲೈಫ್‌ಸ್ಟೈಲ್ ಬ್ರಾಂಡ್ ಅನ್ನು ಪ್ರಾರಂಭಿಸಿದ್ದಾರೆ. ಕಂಪನಿಯ ಪಾದರಕ್ಷೆ ಬ್ರಾಂಡ್ ಮಾಸ್ಟರ್‌ಸ್ಟ್ರೋಕ್ ನಲ್ಲಿ ಧೋನಿ ಸಂಪೂರ್ಣ ಪಾಲನ್ನು ಹೊಂದಿದ್ದಾರೆ. ಫುಡ್ ಮತ್ತು ಪಾನೀಯಗಳ ಸ್ಟಾರ್ಟಪ್ 7ಇಂಕ್ ಬ್ರೂಸ್‌ನಲ್ಲಿ ಧೋನಿ ಷೇರುದಾರರಾಗಿದ್ದಾರೆ. ರನ್ ಆಡಮ್ ಎಂಬ ಟೆಕ್ ಕಂಪನಿಯನ್ನು ಸಹ ಧೋನಿಯ ಹೂಡಿಕೆ ಪೋರ್ಟ್‌ಫೋಲಿಯೊದಲ್ಲಿ ಸೇರಿಸಲಾಗಿದೆ.
ಧೋನಿ ರಾಂಚಿಯಲ್ಲಿ ತಮ್ಮದೇ ಆದ ಹೋಟೆಲ್ ನಡೆಸುತ್ತಿದ್ದಾರೆ. ಕೃಷಿಯಲ್ಲೂ ತೊಡಗಿಕೊಂಡಿದ್ದಾರೆ. ರಾಂಚಿ ಬಳಿ ಧೋನಿ ಅವರಿಗೆ ಸೇರಿದ ದೊಡ್ಡ ಫಾರ್ಮ್‌ಹೌಸ್ ಕೂಡ ಇದೆ. ಹೀಗೆ ಸಕಲ ಕಲಾವಲ್ಲಭನಂತಿರೋ ಧೋನಿ ಕೋಟಿ ಕೋಟಿ ಆದಾಯ ಗಳಿಸುವುದರೊಂದಿಗೆ ಪ್ರಾಮಾಣಿಕವಾಗಿ ತೆರಿಗೆಯನ್ನೂ ಪಾವತಿಸುತ್ತಿರುವುದು ವಿಶೇಷ.