
ನಾಟಿ ವೈದ್ಯ ಬಂಧನ್ ಸಿಂಗ್ ಕಾರ್ವಾರ್ ಎಂಬುವರು ಸೊಪ್ಪುಸದೆ ಬಳಸಿ ಚಿಕಿತ್ಸೆ ನೀಡುತ್ತಾರೆ. ಒಬ್ಬ ರೋಗಿಯಿಂದ ಒಂದು ಬಾರಿಗೆ ಅವರು ಪಡೆದುಕೊಳ್ಳುವುದು ನಲವತ್ತು ರೂಪಾಯಿ ಮಾತ್ರ. ಧೋನಿ ಬಳಿ ಕೂಡ ಅವರು ಅಷ್ಟೇ ಶುಲ್ಕ ಪಡೆದಿದ್ದಾರೆ ಎಂಬುದು ವಿಶೇಷ ಸಂಗತಿಯಾಗಿದೆ.
ರಾಂಚಿಯಿಂದ 70 ಕಿಮೀ ದೂರದ ಕಟಿಂಗ್‌ಕೇಲ ಎಂಬ ಪುಟ್ಟ ಗ್ರಾಮದಲ್ಲಿ ಬಂಧನ್ ಸಿಂಗ್ ಕಳೆದ 28 ವರ್ಷದಿಂದ ಚಿಕಿತ್ಸೆ ನೀಡುತ್ತಿದ್ದಾರೆ. ಅಲ್ಲಿ ಮರದ ಕೆಳಗಿನ ಟಾರ್ಪಲಿನ್ ಟೆಂಟ್ ಹಾಕಿದ್ದು, ಧೋನಿ ಕೂಡ ಅದೇ ಸ್ಥಳದಲ್ಲಿ ಟ್ರೀಟ್ಮೆಂಟ್ ಪಡೆದಿದ್ದಾರೆ. ಕಳೆದ ಒಂದು ತಿಂಗಳಿನಿಂದಲೂ ಧೋನಿ ಇಲ್ಲಿಗೆ ಬಂದು ಹೋಗುತ್ತಿದ್ದಾರೆ.
ಧೋನಿಗಿಂತ ಮೊದಲು ಅವರ ಪೋಷಕರು ಅದೇ ವೈದ್ಯರ ಬಳಿ ಚಿಕಿತ್ಸೆ ಪಡೆದಿದ್ದರು. ಆರಂಭದಲ್ಲಿ ಆ ನಾಟಿ ವೈದ್ಯರು ಧೋನಿಯನ್ನು ಗುರುತು ಹಿಡಿದಿರಲಿಲ್ಲವಂತೆ. ಧೋನಿ ಇಲ್ಲಿಗೆ ಬಂದ ಮಾಹಿತಿ ತಿಳಿಯುತ್ತಿದ್ದಂತೆ ಸುತ್ತಮುತ್ತಲ ಹುಡುಗರು, ಯುವಕರು ಧೋನಿ ಜೊತೆಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದಿದ್ದಾರೆ.
ಧೋನಿ ಸಾಮಾನ್ಯ ಪೇಶೆಂಟ್ ರೀತಿಯಲ್ಲಿ ಬರುತ್ತಿದ್ದರು, ಸೆಲೆಬ್ರಿಟಿ ಎಂದು ಹಮ್ಮುಬಿಮ್ಮ ತೋರಿಸಲಿಲ್ಲ. ಧೋನಿ ಬರುತ್ತಿದ್ದಾರೆಂದು ಗೊತ್ತಾಗುತ್ತಿದ್ದಂತೆ ಅವರನ್ನು ನೋಡಲು ಬರುವವರ ಸಂಖ್ಯೆ ಹೆಚ್ಚಾಯಿತು ಎಂದು ಆ ವೈದ್ಯರು ಪ್ರತಿಕ್ರಿಯೆ ನೀಡಿದ್ದಾರೆ.