ಧಾರವಾಡ: ವಿದ್ಯುತ್ ಪ್ರವಹಿಸಿ ಪ್ರಾಣಪಾಯಕ್ಕೆ ಸಿಲುಕಿದ್ದ ಅಜ್ಜನನ್ನು ಸಮಯ ಪ್ರಜ್ಞೆಯಿಂದ ಮೊಮ್ಮಗ ಬದುಕುಳಿಸಿದ ಘಟನೆ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹನುಮಾಪುರ ಬಳಿ ನಡೆದಿದೆ.
ಮಹಮ್ಮದ್ ಶಮಿ ಮೌಲಾಸಾಬ್ ಬುಕಿಟಗಾರ ಅಜ್ಜನ ಜೀವ ಉಳಿಸಿದ ವೀರ ಬಾಲಕನಾಗಿದ್ದಾನೆ. ಈತ ಕಲಘಟಗಿಯ ಜನತಾ ಇಂಗ್ಲಿಷ್ ಪ್ರೌಢಶಾಲೆಯಲ್ಲಿ 5ನೇ ತರಗತಿ ಓದುತ್ತಿದ್ದಾನೆ. ಮೂರು ದಿನಗಳ ಹಿಂದೆ ಹನುಮಾಪುರ ಸಮೀಪ ಹರಿಯುವ ಬೇಡ್ತಿಹಳ್ಳದ ಬಳಿ ತನ್ನ ಅಜ್ಜ ಮೊಹಮ್ಮದ್ ಅಲಿ ಜೊತೆಗೆ ಬಾಲಕ ಶಮಿ ಮೀನು ಹಿಡಿಯಲು ಹೋಗಿದ್ದಾನೆ.
ಜಮೀನೊಂದರಲ್ಲಿ ಕೊಳವೆ ಬಾವಿ ಸಂಪರ್ಕಿಸುವ ವಿದ್ಯುತ್ ವೈರ್ ತುಂಡಾಗಿ ನೆಲಕ್ಕೆ ಬಿದ್ದಿದೆ. ಇದನ್ನು ಗಮನಿಸದೆ ಮಹಮ್ಮದ್ ಅಲಿ ಮುಂದೆ ಸಾಗಿದಾಗ ವಿದ್ಯುತ್ ಪ್ರವಹಿಸಿ ಪ್ರಾಣಪಾಯಕ್ಕೆ ಸಿಲುಕಿದ್ದಾರೆ. ನೆಲದ ಮೇಲೆ ಅವರು ಬಿದ್ದು ಒದ್ದಾಡುವುದನ್ನು ಗಮನಿಸಿದ ಮಹಮ್ಮದ್ ಶಮಿ ತನ್ನ ಕೈಯಲ್ಲಿದ್ದ ಛತ್ರಿಯ ಪ್ಲಾಸ್ಟಿಕ್ ಹಿಡಿಕೆಯನ್ನು ಮುಂದೆ ಮಾಡಿ ವಿದ್ಯುತ್ ತಂತಿಯನ್ನು ದೂರು ಸರಿಸಿದ್ದಾನೆ.
ನಿರಂತರ ಮಳೆಯಿಂದ ತೇವಾಂಶವಿದ್ದ ಕಾರಣ ನೆಲ, ಬಳ್ಳಿಗಳಿಗೂ ವಿದ್ಯುತ್ ಸ್ಪರ್ಶವಾಗಿದೆ. ಕಠಿಣ ಪರಿಸ್ಥಿತಿಯಲ್ಲಿ ಸಮಯಪ್ರಜ್ಞೆ ತೋರಿದ ಬಾಲಕ ಅಜ್ಜನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾನೆ. ಮೊಹಮ್ಮದ್ ಅಲಿ ಅವರ ಅಂಗೈಗೆ ಕಬ್ಬಿಣದಿಂದ ಬರೆ ಹಾಕಿದ ರೀತಿ ಗಾಯವಾಗಿದೆ. ಒಂದು ಗಂಟೆಗೂ ಅಧಿಕ ಕಾಲ ಪ್ರಜ್ಞಾಹೀನರಾಗಿದ್ದ ಅವರಿಗೆ ಬಾಲಕನೇ ನೀರು ಕೂಡಿಸಿ ಆರೈಕೆ ಮಾಡಿದ್ದಾನೆ. ನಂತರ ಅವರಿಗೆ ಎಚ್ಚರವಾಗಿದೆ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.