ಮನಾಲಿ: ಬಾಲಿವುಡ್ ನ ಹಿರಿಯ ನಟ ಧರ್ಮೇಂದ್ರ ಅವರು ಹಿಮಾಚಲ ಪ್ರದೇಶದ ಅಟಲ್ ಸುರಂಗಕ್ಕೆ ಭೇಟಿ ನೀಡಿದ್ದಾರೆ. 9.02 ಕಿಮೀ ಉದ್ದವಿರುವ ಕುದುರೆಗಾಡಿ ಆಕಾರದ ಸುರಂಗವನ್ನು ನಿರ್ಮಿಸಿರುವ ಪ್ರಭಾವಶಾಲಿ ಎಂಜಿನಿಯರಿಂಗ್ ಸಾಧನೆಯನ್ನು ಕೊಂಡಾಡಿದ್ದಾರೆ.
ಅಟಲ್ ಸುರಂಗವು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗ ಮಾರ್ಗವಾಗಿದೆ. ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಈ ಸುರಂಗ ಮಾರ್ಗವನ್ನು ನಿರ್ಮಿಸಲಾಗಿದೆ. ಈ ಸುರಂಗವು ರೋಹ್ಟಾಂಗ್ ಪಾಸ್ ಮೂಲಕ ಹಾದುಹೋಗುತ್ತದೆ. ಇಂತಹ ಅದ್ಭುತವನ್ನು ನಿರ್ಮಿಸಿದವರಿಗೆ ನಟ ಧರ್ಮೇಂದ್ರ ಸಲಾಂ ಎಂದಿದ್ದು, ಟ್ವಿಟ್ಟರ್ ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ.
ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ನಟನಿಗೆ ಟ್ವೀಟ್ ಮುಖಾಂತರ ಧನ್ಯವಾದ ಅರ್ಪಿಸಿದೆ. 10,000 ಅಡಿಗಳಿಗಿಂತ ಹೆಚ್ಚು ಎತ್ತರವಿರುವ ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವು ಮನಾಲಿ-ಲೇಹ್ ಸಂಪರ್ಕ ಕಲ್ಪಿಸುತ್ತದೆ.
ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಹೆದ್ದಾರಿ ಸುರಂಗಕ್ಕೆ ಇಡಲಾಗಿದೆ. ಅಟಲ್ ಸುರಂಗ ನಿರ್ಮಾಣದಿಂದಾಗಿ ಮನಾಲಿ ಮತ್ತು ಲೇಹ್ ನಡುವೆ 46 ಕಿಲೋಮೀಟರ್ ಅಂತರ ಕಡಿಮೆಯಾಗಿದೆ. ಜೊತೆಗೆ ನಾಲ್ಕರಿಂದ ಐದು ಗಂಟೆಗಳವರೆಗೆ ಪ್ರಯಾಣದ ಸಮಯ ಉಳಿತಾಯವಾಗಿದೆ.
ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 3, 2020 ರಂದು ಉದ್ಘಾಟಿಸಿದ್ದರು. ರಕ್ಷಣಾ ಸಚಿವಾಲಯದ ವಿಭಾಗವಾದ ಬಾರ್ಡರ್ ರೋಡ್ಸ್ ಆರ್ಗನೈಸೇಶನ್, ಸ್ಟ್ರಾಬ್ಯಾಗ್ ಎಜಿ ಜೊತೆಗಿನ ಜಂಟಿ ಉದ್ಯಮವಾದ ಆಫ್ಕಾನ್ಸ್ ಸಹಯೋಗದೊಂದಿಗೆ ಅಟಲ್ ಸುರಂಗವನ್ನು ನಿರ್ಮಿಸಲಾಗಿದೆ.